ಕಲಬುರಗಿ: ಚಿಂಚೋಳಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ 68,690 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ 60,851 ಮತಗಳು ಪಡೆದು ಸೋಲು ಒಪ್ಪಿಕೊಂಡಿದ್ದಾರೆ. ಒಟ್ಟು ಗೆಲುವಿನ ಅಂತರ 7,839 ಮತಗಳಾಗಿವೆ. ಚೊಚ್ಚಲ ಗೆಲುವಿನ ನಗೆ ಬಿರಿದ ಅವಿನಾಶ್ ಜಾಧವ್ ಬಳಿಕ ಈ ಟಿವಿ ಭಾರತದೊಂದಿಗೆ ಮಾತನಾಡಿ, ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಇದು ಕಾರ್ಯಕರ್ತರ ಗೆಲುವು, ಮುಖಂಡರ ಗೆಲುವು, ಗೆಲುವಿಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಹೇಳಿದರು.
ಚಿಂಚೋಳಿ ಕ್ಷೇತ್ರದಲ್ಲಿ ಒಟ್ಟು 1,37,388 ಮತಗಳು ಚಲಾವಣೆಗೊಂಡಿದ್ದವು. ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಅವರು ರಾಜೀನಾಮೆ ನೀಡಿ ಬಿಜೆಪಿಯಿಂದ ಗುಲ್ಬರ್ಗಾ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ ಹಿನ್ನಲೆಯಲ್ಲಿ ಉಪ ಚುನಾವಣೆ ನಡೆದಿತ್ತು.