ಕಲಬುರಗಿ: ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ. ಸೀಲ್ಡೌನ್ನಿಂದಾಗಿ ರೈಲಿನಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬಳು ಊಟಕ್ಕಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾವೂರ್ ಗ್ರಾಮದ ನಿವಾಸಿಯಾಗಿರುವ ವೃದ್ಧೆ ಸಿದ್ದಮ್ಮಾ ರೈಲಿನಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದಳು. ಇವಳಿಗೆ ವಿಕಲಚೇತನ ಮಗನಿದ್ದು, ಸೊಸೆ, ಮೊಮ್ಮಕ್ಕಳು ಸಹ ಇದ್ದಾರೆ. ಮಗ ಕೂಡ ಕಾಲು ಕಳೆದುಕೊಂಡು ಏನು ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿದ್ದಾನೆ. ತಾಯಿಯೊಂದಿಗೆ ಆತ ಕೂಡ ರೈಲಿನಲ್ಲಿ ಭಿಕ್ಷೆ ಬೇಡುತ್ತಾನೆ. ಇದೀಗ ಕೊರೊನಾದಿಂದಾಗಿ ರೈಲು, ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಭಿಕ್ಷಾಟನೆಯನ್ನೇ ನಂಬಿ ಬದುಕುತ್ತಿದ್ದ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದೆ.
ಇನ್ನು, ರಾವೂರ್ ಗ್ರಾಮದಲ್ಲಿ ಕಳೆದ ವಾರ ನಿಷೇಧಾಜ್ಞೆ ಉಲ್ಲಂಘನೆಯಾದ ಹಿನ್ನೆಲೆ ರಥೋತ್ಸವದ ಘಟನೆಯಿಂದಾಗಿ ಗ್ರಾಮವನ್ನು ಸಂಪೂರ್ಣ ಬಂದ್ ಮಾಡಿ ಸಿಲ್ಡೌನ್ ಘೋಷಿಸಲಾಗಿದೆ. ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬಾರದಂತೆ ಗ್ರಾಮಸ್ಥರಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದ್ದರಿಂದ ಗ್ರಾಮದಿಂದ ಹೊರ ಬರಲಾಗದೆ, ದೇವಸ್ಥಾನದ ಬಾಗಿಲಲ್ಲಿ ಕುಳಿತು ವೃದ್ಧೆ ಕಣ್ಣೀರಿಡುತ್ತಿದ್ದಾಳೆ.
ಸರ್ಕಾರ ಕೊಡುತ್ತಿರುವ ಅಕ್ಕಿ ಇವರ ಕುಟುಂಬಕ್ಕೆ ಒಂದು ವಾರದ ಮಟ್ಟಿಗೆ ಸಾಲುತ್ತೆ. ನಂತರ ದಿನಗಳಲ್ಲಿ ತಮ್ಮ ಕುಟುಂಬ ಉಪವಾಸ ಬೀಳಬೇಕಿದೆ. ಹಾಗಾಗಿ ಸರ್ಕಾರ ತಮಗೆ ಮತ್ತಷ್ಟು ಸಹಾಯ ಮಾಡಬೇಕಿದೆ ಎಂದು ವೃದ್ಧೆ ಮನವಿ ಮಾಡಿದ್ದಾಳೆ.