ಕಲಬುರಗಿ: ಸೂರ್ಯ ನಗರಿ ಖ್ಯಾತಿಯ ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ರಣಬಿಸಿಲು ಜನರನ್ನು ಹೈರಾಣಾಗಿಸಿದೆ. ಏಪ್ರಿಲ್ ಮೊದಲ ವಾರದಲ್ಲೇ ತಾಪಮಾನ 42 ಡಿಗ್ರಿ ದಾಖಲಾಗಿದ್ದು, ಈ ತಿಂಗಳ ಅಂತ್ಯ ಹಾಗೂ ಮುಂದಿನ ಮೇ ತಿಂಗಳಲ್ಲಿ ಮತ್ತಷ್ಟು ತಾಪ ಏರಿಕೆಯಾಗಲಿದೆ. ಕಳೆದ ಎರಡು ಬೇಸಿಗೆ ಕೋವಿಡ್ ಕಾರಣದಿಂದಾಗಿ ಮನೆಯಲ್ಲಿಯೇ ಬೆವರುತ್ತಾ, ಬಸವಳಿದಿದ್ದ ಜನತೆ ಇದೀಗ ಕೋವಿಡ್ ಇಲ್ಲದಿದ್ದರೂ ಮನೆಯಿಂದ ಹೊರಬರಲು ಚಿಂತಿಸುವಂತಾಗಿದೆ.
ಬೆಳಗ್ಗೆ 8 ಗಂಟೆಯಿಂದ ಆರಂಭವಾಗುವ ಬಿಸಿಲು ಸಂಜೆ 6 ಗಂಟೆಯಾದರೂ ಕಡಿಮೆಯಾಗುತ್ತಿಲ್ಲ. ಮಧ್ಯಾಹ್ನದ ಹೊತ್ತು ಭೂಮಿ ಅಕ್ಷರಶಃ ಕಾದ ಹಂಚಿನಂತಾಗುತ್ತಿದೆ. ಡಾಂಬರ್ ರಸ್ತೆಗಳು ಬಿಸಿಲಿನ ತೇವದಿಂದ ಜೀನಗುಡುತ್ತಿವೆ. ಬಿಸಿಯಾದ ಒಣಹವೆಯಿಂದ ಬೇವರು ಹೇಳದಂತೆ ದೇಹದಿಂದ ಹರಿಯುತ್ತಿದೆ. ಹೀಗಾಗಿ ಜನರು ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲು ಹಿಂಜರಿಯುವಂತಾಗಿದೆ.
ಕಲಬುರಗಿಯಲ್ಲಿ ಅತಿ ಹೆಚ್ಚು ಬಿಸಿಲು: ಕಲ್ಯಾಣ ಕರ್ನಾಟಕದ ಬಹುತೇಖ ಜಿಲ್ಲೆಗಳಲ್ಲಿ ಬಿಸಿಲು ಪ್ರತಿ ವರ್ಷ ಗರಿಷ್ಠ ಮಟ್ಟದಲ್ಲಿ ದಾಖಲಾಗುತ್ತದೆ. ಈ ಬಾರಿಯೂ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಅತಿ ಹೆಚ್ಚು ಬಿಸಿಲು ದಾಖಲಾಗುತ್ತಿದೆ. ಅದೇ ರೀತಿ ರಾಯಚೂರು, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಬಿಸಿಲು ದಾಖಲಾಗುತ್ತಿದೆ.
ಬಾಯಾರಿಕೆ ತಣಿಸಲು ಶತ ಪ್ರಯತ್ನ: ಸದ್ಯ 42 ಡಿಗ್ರಿಯಷ್ಟು ತಾಪಮಾನ ದಾಖಲಾಗಿದ್ದು, ಈ ತಿಂಗಳ ಅಂತ್ಯ ಹಾಗೂ ಮುಂಬರುವ ಮೇ ತಿಂಗಳಿನಲ್ಲಿ ರಣಬಿಸಿಲು 42 ಡಿಗ್ರಿ ಸೆಲ್ಸಿಯಸ್ ಗಡಿದಾಟುವ ಸಾಧ್ಯತೆ ಇದೆ. ಬಿಸಿಲು ಹೆಚ್ಚಾದಂತೆ ಬಾಯಾರಿಕೆ ತಡೆಯಲು ಆಗುತ್ತಿಲ್ಲ, ಬಾಯಾರಿಕೆ ತಣಿಸಲು ಜನರು ಹತ್ತಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತಂಪು ಪಾನೀಯಾ, ನೀರಿನಂಶವುಳ್ಳ ಹಣ್ಣುಗಳು, ಮಣ್ಣಿನ ಮಡಕೆಗಳ ಮೊರೆ ಹೋಗುತ್ತಿದ್ದಾರೆ. ಬಿಸಿಲಿನ ಝಳವನ್ನು ತಪ್ಪಿಸಲು ಎಸಿ, ಕೂಲರ್, ಫ್ಯಾನ್ ಸತತವಾಗಿ ಚಾಲನೆಯಲ್ಲಿರುತ್ತವೆ.
ರಸ್ತೆಗೆ ನೀರು, ಸಿಗ್ನಲ್ ಫ್ರೀ ಸಂಚಾರಕ್ಕೆ ಆಗ್ರಹ ಬೆಳಗ್ಗೆಯಿಂದಲೇ ರಣಬಿಸಿಲಿನ ಪ್ರಖರತೆಯಿದ್ದು, ಬೆಳಗ್ಗೆ 11 ರಿಂದ 5 ವರೆಗೆ ಕೆಂಡದ ಮೇಲೆ ನಡೆದಂತ ಅನುಭವವಾಗುತ್ತಿದೆ. ವಾಹನ ಮೇಲೆ ಹೋಗುವಾಗ ಬಿಸಿಯಾದ ಒಣಹವಾಯಿಂದ ಜನರು ನಿತ್ರಾಣಗೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಲ್ಲುವುದು ದುಸ್ಥರವಾಗುತ್ತಿದೆ. ಬಿಸಿಲು ಏರಿಕೆ ಆಗುತ್ತಿದ್ದಂತೆ ಸಿಗ್ನಲ್ ಫ್ರೀ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಬೇಕು. ಜತೆಗೆ ರಸ್ತೆ ಮೇಲಿನ ಝಳ ತಪ್ಪಿಸಲು ಮಧ್ಯಾಹ್ನದ ಹೊತ್ತು ನೀರು ಸಿಂಪಡನೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಿಸಿಲಿನಿಂದ ರಕ್ಷಣೆಗೆ ಹೀಗೆ ಮಾಡಿ: ಬಿಸಿಲಿನ ತಾಪದಿಂದ ಮಾನವನ ದೇಹದ ಮೇಲೆ ದುಷ್ಪರಿಣಾಮಗಳುಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಬಿಸಿಲಿನಿಂದ ರಕ್ಷಣೆಗೆ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಬೇಕು. ಹೋರಹೋಗುವದು ಅನಿವಾರ್ಯವಾಗಿದ್ದರೆ, ಸಾಧ್ಯವಾದಷ್ಟು ನೆರಳನ್ನು ಆಶ್ರಯಿಸಬೇಕು. ಹೆಚ್ಚು ನೀರು ಕುಡಿಯಬೇಕು. ಹೊರಹೋದಾಗ ಮುಖಕ್ಕೆ ಸ್ಕಾರ್ಫ್ ಧರಿಸುವದು, ಕೊಡೆ ಬಳಸುವುದು, ಸಡಿಲು ಹಾಗೂ ಖಾದಿ ಬಟ್ಟೆ ಧರಿಸುವದು ಉತ್ತಮ. ಕೆಮಿಕಲ್ ರಹಿತವಾದ ತಂಪು ಪಾನೀಯ, ಮಜ್ಜಿಗೆ, ಎಳೆನೀರು ಸೇವಿಸಬೇಕು. ಸಾಧ್ಯವಾದಷ್ಟು ಮಕ್ಕಳು, ಹಿರಿಯರು ಹಾಗೂ ಮಹಿಳೆಯರು ಮನೆಯಲ್ಲೇ ಇರುವುದು ಸೂಕ್ತ.
ಇದನ್ನೂ ಓದಿ: ರಣಬಿಸಿಲಿಗೆ ಬಿಎಂಟಿಸಿ ಚಾಲಕರು ತತ್ತರ: ಸಿಬ್ಬಂದಿಗೆ ಎದುರಾಗ್ತಿದೆ ಅನಾರೋಗ್ಯ ಸಮಸ್ಯೆ