ಕಲಬುರಗಿ: ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದ ಕಾರಣ ರಸ್ತೆ ಮೇಲೆಯೇ ಶವ ಇಟ್ಟು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಅಫಜಲಪುರ ತಾಲೂಕಿನ ಕಲ್ಲೂರ ತಾಂಡಾದಲ್ಲಿ ನಡೆದಿದೆ.
ಕಲ್ಲೂರ ತಾಂಡಾದ ಬಂಜಾರ ಸಮುದಾಯದ ಮೃತರ ಅಂತ್ಯಕ್ರಿಯೇಗಾಗಿ ಪುರಸಭೆಯಿಂದ 20 ಗುಂಟೆ ಸ್ಮಶಾನ ಭೂಮಿ ನೀಡಲಾಗಿದೆ. ಇಲ್ಲಿಗೆ ತೆರಳಲು ರಸ್ತೆ ಇಲ್ಲದ ಕಾರಣ ಕಾಲುದಾರಿಯಲ್ಲಿ ಹೋಗಲಾಗುತ್ತದೆ. ಆದ್ರೆ ಕಾಲುದಾರಿಗೆ ಹೊಂದಿಕೊಂಡಿರುವ ಕೆಲ ಜಮೀನಿನ ಮಾಲೀಕರು ಓಡಾಟಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಮಾರ್ಗ ಮಧ್ಯದಲ್ಲಿ ಗುಂಡಿ ತೋಡಿ ರಸ್ತೆ ಬಂದ್ ಮಾಡಿದ್ದಾರೆ ಅಂತ ತಾಂಡಾ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ತಾಂಡಾದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ರುದ್ರಭೂಮಿಗೆ ತೆರಳಲು ದಾರಿಯೇ ಇಲ್ಲದ ಕಾರಣ ರೊಚ್ಚಿಗೆದ್ದ ತಾಂಡಾ ನಿವಾಸಿಗಳು ಅಫಜಲಪುರ - ದೇಸಾಯಿ ಕಲ್ಲೂರ ನಡುವಿನ ಮುಖ್ಯ ರಸ್ತೆಯ ಮೇಲೆ ಶವವಿಟ್ಟು ವಾಹನ ಸಂಚಾರ ತಡೆದು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಫಜಲಪುರ ಸಿಪಿಐ ಜಗದೇವಪ್ಪಾ ಪಾಳಾ, ಜಮೀನಿನ ಮಾಲೀಕರು ಮತ್ತು ಪ್ರತಿಭಟನಕಾರರ ಮನವೊಲಿಸಿ ಅಂತ್ಯಕ್ರಿಯೆಗೆ ತೆರಳಲು ತಾತ್ಕಾಲಿಕ ಪರಿಹಾರ ಕಲ್ಪಿಸಿಕೊಟ್ಟರು. ಸಮಸ್ಯೆಯ ಕುರಿತು ಶಾಶ್ವತ ಪರಿಹಾರಕ್ಕಾಗಿ ತಹಸೀಲ್ದಾರರು ಹಾಗೂ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ರಸ್ತೆ ಬಂದ್ ಆಗಿ ಸುಮಾರು ಹೊತ್ತು ವಾಹನ ಸಂಚಾರ ಸ್ಥಗಿತಗೊಂಡ ಹಿನ್ನೆಲೆ ಪದವಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡಿದರು.