ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ನಾಲ್ವರಲ್ಲಿ ಶಂಕಿತ ಕೊರೊನಾ ವೈರಸ್ ಕಂಡುಬಂದ ಹಿನ್ನೆಲೆ, ಅವರ ಗಂಟಲು ದ್ರವವನ್ನು ಲ್ಯಾಬ್ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದರು.
ಕೊರೊನಾದಿಂದ ಮೃತಪಟ್ಟ ವೃದ್ಧನ ಇಬ್ಬರು ಸಂಬಂಧಿಕರು ಹಾಗೂ ಸೌದಿಯಿಂದ ಬಂದ ಚಿತ್ತಾಪೂರ ತಾಲೂಕಿನ ಓರ್ವ ಮತ್ತು ದುಬೈದಿಂದ ಬಂದ ಚಿಂಚೋಳಿ ತಾಲೂಕಿನ ಓರ್ವನಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ನಾಲ್ವರನ್ನು ಇಎಸ್‌ಐ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈವರೆಗೂ ಮೃತ ವ್ಯಕ್ತಿ ಸಂಬಂಧಿಕರೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಗುರುತಿಸಲಾದ 71 ಮಂದಿ ಜೊತೆಗೆ ಎರಡನೇ ಸಂಪರ್ಕ ಹೊಂದಿದ್ದ 238 ಮಂದಿ ಹಾಗೂ ವಿದೇಶದಿಂದ ಮರಳಿದ 61 ಮಂದಿ ಸೇರಿದಂತೆ ಒಟ್ಟು 370 ಜನರ ಮೇಲೆ ನಿಗಾ ವಹಿಸಲಾಗಿದೆ. ಇಷ್ಟು ಮಂದಿಯಲ್ಲಿ ಎಂಟು ಮಂದಿಗೆ ಪ್ರತ್ಯೇಕ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರನ್ನು ಹೋಮ್ ಕ್ವಾರಂಟೈನ್ನಲ್ಲಿಟ್ಟು ನಿಗಾ ವಹಿಸಲಾಗುತ್ತಿದೆ ಎಂದರು.
ವಿದೇಶದಿಂದ ಬಂದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಇದಕ್ಕಾಗಿ 24 ಗಂಟೆ ಸಹಾಯವಾಣಿ ಸ್ಥಾಪಿಸಲಾಗಿದೆ. ಸಹಾಯವಾಣಿ ಸಂಖ್ಯೆಗೆ (08472-278604/ 278677) ಕರೆ ಮಾಡಿ ಮಾಹಿತಿ ನೀಡಬಹುದು. ಸಾಮಾಜಿಕ ಜಾಲತಾಣದಲ್ಲಿ ಹರಡುವ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಜಿಲ್ಲಾಡಳಿತ ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಮನವಿ ಮಾಡಿದರು.