ಕಲಬುರಗಿ: ಪಿಎಸ್ಐ ಆಗಬೇಕು ಅಂತ ಅಕ್ರಮದ ಹಾದಿ ತುಳಿದ ಅಭ್ಯರ್ಥಿಗಳು ಆಡಿದ ಆಟಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಹೂವಿನ ಕುಂಡದಲ್ಲಿ ಬ್ಲೂಟೂತ್ ಡಿವೈಸ್ ಬಚ್ಚಿಟ್ಟು ಅಕ್ರಮವೆಸಗಿದ್ದು ಒಂದಡೆಯಾದ್ರೆ, ಇನ್ನೊಬ್ಬ ಅಭ್ಯರ್ಥಿ ರಾತ್ರೋರಾತ್ರಿ ಪರೀಕ್ಷಾ ಕೇಂದ್ರಕ್ಕೆ ತೆರಳಿ ಶೌಚಾಲಯದಲ್ಲಿ ಬ್ಲೂಟೂತ್ ಡಿವೈಸ್ ಬಚ್ಚಿಟ್ಟು ಬಂದಿದ್ದ ಎಂಬ ಆತಂಕಕಾರಿ ಸಂಗತಿ ಹೊರಬಿದ್ದಿದೆ.
ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ವಿಚಾರ ಈಗಾಗಲೇ ಜಗಜ್ಜಾಹೀರಾಗಿದೆ. ಈ ಹಿಂದೆ ಪರೀಕ್ಷಾ ಕೇಂದ್ರದ ಹೂವಿನ ಕುಂಡದಲ್ಲಿ ಬ್ಲೂಟೂತ್ ಅಡಗಿಸಿಟ್ಟು ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಮಾಡಿದ್ದೆ ಎಂದು ಸಿಐಡಿ ಬಂಧನಕ್ಕೊಳಗಾಗಿದ್ದ ಆರೋಪಿ ಪ್ರಭು ಬಾಯ್ಬಿಟ್ಟಿದ್ದ. ಇದೀಗ ನ್ಯೂ ನೋಬಲ್ ಶಾಲೆ ಕೇಂದ್ರದಲ್ಲಿ ಅಕ್ರಮ ಮಾಡಿ ಪರೀಕ್ಷೆ ಬರೆದು ಪಾಸಾಗಿರುವ ಇಸ್ಮಾಯಿಲ್ ಎಂಬ ಅಭ್ಯರ್ಥಿ ತಾನು ಶಾಲೆಯ ಟಾಯ್ಲೆಟ್ ರೂಮ್ನಲ್ಲಿ ಬ್ಲೂಟೂತ್ ಡಿವೈಸ್ ಬಚ್ಚಿಟ್ಟು ಅಕ್ರಮ ಎಸಗಿರುವ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.
ಹೇಗಾದರೂ ಸರಿ ತಾನೂ ಪಿಎಸ್ಐ ಆಗಲೇಬೇಕು ಅಂತ ಪರೀಕ್ಷೆಗೆ ನಿಗದಿಯಾಗಿದ್ದ ನ್ಯೂ ನೋಬಲ್ ಶಾಲೆಗೆ ರಾತ್ರಿ 3 ಗಂಟೆ ಸುಮಾರಿಗೆ ತೆರಳಿದ ಇಸ್ಮಾಯಿಲ್, ಯಾರಿಗೂ ಗೊತ್ತಾಗದಂತೆ ಶೌಚಾಲಯ ಕೋಣೆಯಲ್ಲಿ ಡಿವೈಸ್ ಇಟ್ಟು ಬಂದು ಪರೀಕ್ಷೆ ವೇಳೆ ಅಕ್ರಮವೆಸಗಿದ್ದಾನೆಂದು ಹೇಳಲಾಗುತ್ತಿದೆ.
ಓದಿ: ಪಿಎಸ್ಐ ನೇಮಕಾತಿ ಹಗರಣ.. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ