ಕಲಬುರಗಿ: ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾದ ಅಭ್ಯರ್ಥಿ ಪ್ರಭುನನ್ನು ಎಮ್‌ಎಸ್‌ಐ ಡಿಗ್ರಿ ಕಾಲೇಜಿಗೆ ಕರೆತಂದು ಸ್ಥಳ ಮಹಜರ್ ಮಾಡಲಾಗಿದೆ. ಪ್ರಭು ಬ್ಲೂಟೂತ್ ಡಿವೈಸ್ ಸಹಾಯದಿಂದ ಪಿಎಸ್ಐ ಪರೀಕ್ಷೆ ಬರೆದು ಸ್ಥಾನ ಗಿಟ್ಟಿಸಿಕೊಂಡಿದ್ದಾನೆ ಎಂಬ ಆರೋಪದ ಹಿನ್ನೆಲೆ ಸೋಮವಾರ ಆತನನ್ನು ಬಂಧಿಸಲಾಗಿದೆ.
ಅಲ್ಲದೆ ಪ್ರಭುನಿಂದ 50 ಲಕ್ಷ ಹಣ ಪಡೆದು ಡಿವೈಸ್ ಕೊಟ್ಟು ಸಹಕಾರ ನೀಡಿದ ಆರೋಪದ ಮೇಲೆ ಚಂದ್ರಕಾಂತ್ ಕುಲಕರ್ಣಿ ಬಂಧನವಾಗಿದೆ. ಸದ್ಯ ಅಭ್ಯರ್ಥಿ ಪ್ರಭುನನ್ನು ನಗರದ ಸಿ.ಪಿ ಸ್ಟೇಡಿಯಂ ಹಿಂಬದಿಯಲ್ಲಿರುವ ಎಮ್.ಎಸ್.ಐ ಡಿಗ್ರಿ ಕಾಲೇಜಿಗೆ ಕರೆತಂದು ಹೆಚ್ಚಿನ ಮಾಹಿತಿ ಕಲೆ ಹಾಕಲಾಗಿದೆ.
ಹೂವು ಕುಂಡದಲ್ಲಿತ್ತು ಬ್ಲೂಟೂತ್ ಡಿವೈಸ್: ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಭು ಪರೀಕ್ಷೆಯ ಮುನ್ನಾ ದಿನ ಪರೀಕ್ಷಾ ಕೇಂದ್ರದ ಆವರಣದ ಹೂವಿನ ಪಾಟ್‌ನಲ್ಲಿ ಡಿವೈಸ್ ಮುಚ್ಚಿಟ್ಟಿದ್ದ ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪರೀಕ್ಷೆ ಕೋಣೆಗೂ ಹಾಗೂ ಡಿವೈಸ್ ಇಟ್ಟಿದ್ದ ಸ್ಥಳ ಕೇವಲ 20 ಮೀಟರ್ ಅಂತರವಿದೆ. ಪರೀಕ್ಷೆ ನಡೆದ ಸಂದರ್ಭದಲ್ಲಿ ಯಾರಿಗೂ ಗೊತ್ತಾಗದಂತೆ ಡಿವೈಸ್ ಬಳಸಿಕೊಂಡು ಪರೀಕ್ಷೆ ಅಕ್ರಮ ಮಾಡಿದ್ದನು. ಈ ಹಿನ್ನೆಲೆ ಬ್ಲೂಟೂತ್ ಇಟ್ಟಿದ್ದ ಸ್ಥಳ ಹಾಗೂ ಪರೀಕ್ಷೆ ಬರೆದ ಕೋಣೆಯನ್ನು ಪೊಲೀಸರು ಪರಿಶೀಲಿಸಿದರು. ಸ್ಟೇಷನ್ ಬಜಾರ್ ಠಾಣೆ ಸಿಪಿಐ ನೇತೃತ್ವದಲ್ಲಿ ಸ್ಪಾಟ್ ಇನ್ವೆಷ್ಟಿಗೇಶನ್ ಮಾಡಲಾಗಿದೆ.
ಇದನ್ನೂ ಓದಿ: ಸಿಎಂ ಬದಲಾವಣೆ ಬಿಜೆಪಿಯ ಆಂತರಿಕ ವಿಚಾರ, ನಮಗ್ಯಾಕೆ ಬೇಕು? : ಡಿಕೆಶಿ