ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್, ದಿವ್ಯಾ ಹಾಗರಗಿ ಸೇರಿ ನಾಲ್ವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಈ ಮೂಲಕ ಇನ್ನಷ್ಟು ದಿನ ಆರೋಪಿಗಳಿಗೆ ಜೈಲೇ ಗತಿಯಾಗಿದೆ. ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಕಲಬುರಗಿ ಜಿಲ್ಲಾ 3ನೇ ಜೆಎಂಎಫ್‌ಸಿ ನ್ಯಾಯಾಲಯ ತಿರಸ್ಕರಿಸಿದೆ.
ಬ್ಲೂಟೂತ್ ಡಿವೈಸ್ ಮೂಲಕ ಪಿಎಸ್ಐ ಅಭ್ಯರ್ಥಿಗಳು ತೇರ್ಗಡೆ ಆಗಲು ಸಹಕರಿಸುತ್ತಿದ್ದ ಆರೋಪಿ ಆರ್.ಡಿ.ಪಾಟೀಲ್, ಎನ್.ವಿ. ಸುನೀಲ್, ತಮ್ಮ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪರೀಕ್ಷೆ ನಡೆಸಲು ಸಹಕರಿಸಿದ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಮತ್ತು ಇದೆ ಶಾಲೆಯ ಹೆಡ್ಮಾಸ್ಟರ್ ಕಾಶಿನಾಥ ಅವರ ಜಾಮೀನು ಅರ್ಜಿಯನ್ನ ನ್ಯಾಯಾಧೀಶ ಬಸವರಾಜ ನೇಸರಗಿ ಅವರ ನೇತೃತ್ವದ ಪೀಠ ತಿರಸ್ಕರಿಸಿದೆ.
ಈ ಹಿಂದೆಯೂ ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಆರೋಪಿಗಳಿಗೆ ಜಾಮೀನು ನೀಡದಂತೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದೆ. ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ತೀವ್ರಗೊಳಿಸಿದೆ. ಕಲಬುರಗಿ ಅಷ್ಟೇ ಅಲ್ಲದೇ ಬೆಂಗಳೂರಲ್ಲಿ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅಂತೆಯೇ ಪಿಎಸ್ಐ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸುವುದಾಗಿ ಸರ್ಕಾರ ಆದೇಶಿಸಿದೆ. ಈಗಾಗಲೇ ತೇರ್ಗಡೆಯಾದ ಅಭ್ಯರ್ಥಿಗಳು ಮರು ಪರೀಕ್ಷೆಯನ್ನು ವಿರೋಧಿಸಿ, ಕೋರ್ಟ್ ಮೆಟ್ಟಿಲೇರಿದ್ದಾರೆ.
(ಓದಿ: PSI ನೇಮಕಾತಿ ಹಗರಣ: ಡ್ಯಾಂಗೆ ಮೊಬೈಲ್ ಎಸೆದ ಕಿಂಗ್‌ಪಿನ್.. ಹುಡುಕಾಟಕ್ಕೆ ನೀರಿಗಿಳಿದ ಸಿಐಡಿ!)