ರಾಯಚಚೂರು/ಕಲಬುರಗಿ: ರೈಲು ಸಂಚಾರ ವಿಳಂಬವಾದ ಹಿನ್ನೆಲೆ ಪರೀಕ್ಷೆ ಬರೆಯಲು ಕಲಬುರಗಿಗೆ ಹೊರಟಿದ್ದ ಪರೀಕ್ಷಾರ್ಥಿಗಳು ಪರದಾಡಿ ರಾಯಚೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಕಲಬುರಗಿಯಲ್ಲಿ PWD AE ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಇತ್ತು. ಬೆಂಗಳೂರಿನಿಂದ ಪರೀಕ್ಷಾರ್ಥಿಗಳು ಕಲಬುರಗಿಗೆ ಹೊರಟಿದ್ದರು. ಆದ್ರೆ ರೈಲು ರಾಯಚೂರಿನಲ್ಲೇ ಇದ್ದ ಹಿನ್ನೆಲೆ ಪರೀಕ್ಷಾರ್ಥಿಗಳು ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಹಳಿ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಬೆಳಗ್ಗೆ 6ಕ್ಕೆ ಕಲಬುರಗಿಗೆ ತಲುಪಬೇಕಿದ್ದ ಹಾಸನ-ಸೋಲಾಪುರ ಸೂಪರ್ ಫಾಸ್ಟ್ ರೈಲು ಬೆ. 9 ಗಂಟೆಯಾದರೂ ರಾಯಚೂರಿನಲ್ಲಿತ್ತು.
ಕಲಬುರಗಿಯಲ್ಲಿ 10ಕ್ಕೆ ಪರೀಕ್ಷೆ ಸಮಯ ನಿಗದಿಯಾಗಿತ್ತು. ರೈಲು ವಿಳಂಬದಿಂದ ಪರೀಕ್ಷಾರ್ಥಿಗಳು ಪರದಾಟ ನಡೆಸಿ, ಮರು ಪರೀಕ್ಷೆ ಮಾಡುವಂತೆ ಒತ್ತಾಯಿಸಿ ರೈಲು ತಡೆದು ಹೋರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: ಪರಿಷತ್ ಫಲಿತಾಂಶ : 'ಕೈ' ಕೆಡವಿ ಗೆದ್ದ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ
ಪರೀಕ್ಷೆ ಹಿನ್ನೆಲೆ ಯಶವಂತಪುದಿಂದ ವಿಶೇಷವಾಗಿ ರೈಲು ಬಿಡಲಾಗಿತ್ತು. ಹಾಸನ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪರೀಕ್ಷೆಗೆ ಅಭ್ಯರ್ಥಿಗಳು ಇದೇ ರೈಲು ಮೂಲಕ ಆಗಮಿಸುತ್ತಿದ್ದರು. ಪರೀಕ್ಷೆಗೆ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು. ಆದ್ರೀಗ ರೈಲು ಸಂಚಾರ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.