ಕಲಬುರಗಿ: ನಿನ್ನೆ ನಿಧನರಾದ ಹಿರಿಯ ಸಾಹಿತಿ ಪ್ರೊ. ಚೆನ್ನಣ್ಣ ವಾಲೀಕಾರ ಅವರ ಅಂತ್ಯಕ್ರಿಯೆ ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಶಂಕರವಾಡಿ ಗ್ರಾಮದಲ್ಲಿ ನಡೆಯಿತು.
ಅನಾರೋಗ್ಯದಿಂದ ಬಳಲುತ್ತಿದ್ದ ವಾಲೀಕಾರ (78) ಅವರು ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಕಲಬುರಗಿಯ ಹಿಂದಿ ಪ್ರಚಾರ ಸಭೆಯ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಿರಿಯ ಸಾಹಿತಿಗಳು, ಗಣ್ಯರು, ನಾಗರಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ನಿವೃತ್ತಿ ಹೊಂದಿದ್ದ ಅವರು, ಬಂಡಾಯ ಸಾಹಿತ್ಯ ಘಟ್ಟದಲ್ಲಿ ಮುಂಚೂಣಿ ಲೇಖಕರೆನಿಸಿಕೊಂಡಿದ್ದರು. ಸದಾ ಕೆಂಪು ಶರ್ಟ್ ಧರಿಸುವ ಮೂಲಕ ಎಡಪಂಥೀಯ ವಿಚಾರಧಾರೆಗಳ ಸಂಕೇತವಾಗಿದ್ದರು. ತಮ್ಮ ವೇತನವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವ್ಯಯಿಸುವ ಮೂಲಕ ನಿಜವಾದ ಸಮಾಜವಾದಿ ಎನಿಸಿಕೊಂಡಿದ್ದರು. 11 ಕವನ ಸಂಕಲನ, 12 ನಾಟಕ, 5 ಕಾದಂಬರಿ, ನಾಲ್ಕು ಮಹಾ ಕಾವ್ಯ ಸೇರಿದಂತೆ ಹಲವಾರು ಕೃತಿಗಳ ಅಮೂಲ್ಯ ಕೊಡುಗೆಯನ್ನು ವಾಲೀಕಾರ ನೀಡಿದ್ದರು.
ಇನ್ನು ಕಲಬುರಗಿಯ ಹಿಂದಿ ಪ್ರಚಾರ ಸಭೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ್ ಸೇಡಂ, ಕೆ.ಬಿ.ಶಾಣಪ್ಪ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಹಿರಿಯ ಸಾಹಿತಿ ಗೀತಾ ನಾಗಭೂಷಣ, ಜಾನಪದ ವಿವಿ ಕುಲಪತಿ ಪ್ರೊ. ಡಿ.ಬಿ.ನಾಯಕ್, ಕೆ.ಪಿ.ಎಸ್.ಸಿ. ಮಾಜಿ ಸದಸ್ಯೆ ನಾಗಬಾಯಿ ಬಳ್ಳಾ, ಹಿರಿಯ ಸಾಹಿತಿಗಳು, ಗಣ್ಯರು, ನಾಗರಿಕರು ವಾಲೀಕಾರರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಶ್ರದ್ಧಾಂಜಲಿ ಸಲ್ಲಿಸಿದರು.