ಕಲಬುರಗಿ : ಕಡಿಮೆ ನೀರಿನಲ್ಲಿ ಹೆಚ್ಚಿನ ಬೆಳೆ ತೆಗೆಯುವ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ ಈ ಪದ್ಧತಿಯನ್ನು ಪ್ರತಿವರ್ಷ ಬರಗಾಲ ಎದುರಿಸುವ ತೊಗರಿನಾಡು ಕಲಬುರ್ಗಿ ಜಿಲ್ಲೆಯಲ್ಲಿ ಅಳವಡಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಬರಡು ಭೂಮಿ ಹಾಗೂ ನೀರಿನ ಕೊರತೆ ಹೆಚ್ಚಿರುವ ಇಸ್ರೇಲ್ ದೇಶದಲ್ಲಿ ಅಲ್ಲಿನ ಜನ ತಮ್ಮದೆಯಾದ ವಿಶಿಷ್ಟ ಯಂತ್ರೋಪಕರಣಗಳ ಸಹಾಯದಿಂದ ಕಡಿಮೆ ನೀರಿನಲ್ಲಿ ಬಹು ಬೆಳೆ ಬೆಳೆಯುತ್ತಾರೆ. ಇದೀಗ ಅದೇ ಪದ್ಧತಿಯನ್ನು ಜಿಲ್ಲೆಯಲ್ಲಿ ಅಳವಡಿಸಲು ರಾಜ್ಯ ಸರ್ಕಾರ ಯೋಜನೆ ಹಾಕಿಕೊಂಡಿದೆ.
ಪ್ರಾಯೋಗಿಕವಾಗಿ ಜಿಲ್ಲೆಯ 100 ಎಕ್ಕರೆ ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲು ಬರದ ಸಿದ್ಧತೆ ನಡೆದಿದೆ. ಇದೇ 14ರಂದು ಇಸ್ರೇಲ್ ಮೂಲದ ತಂಡವೊಂದು ಜಿಲ್ಲೆಗೆ ಭೇಟಿ ನೀಡಲಿದ್ದು, ಈ ಭಾಗದಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚಿನ ಬೆಳೆ ತೆಗೆಯುವ ಬಗ್ಗೆ ಮಾಹಿತಿ ಕಲೆ ಹಾಕಲಿದೆ. ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವ ಮುರುಗೇಶ ನಿರಾಣಿಯವರ ವಿಶೇಷ ಆಸಕ್ತಿಯಿಂದ ಈ ಪದ್ಧತಿ ಜಾರಿಗೆ ಬರುತ್ತಿದೆ.
ಇಸ್ರೇಲ್ ಕೃಷಿ ಪದ್ಧತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅಲ್ಲಿಯ ರೈತರು ಯಾವುದೇ ಒಂದು ಬೆಳೆ ಬೆಳೆದು, ನಷ್ಟವಾದರೆ ಚಿಂತೆಗೀಡಾಗುವುದಿಲ್ಲ. ಬದಲಾಗಿ ಬೇರೆ ಬೆಳೆಯಲ್ಲಿ ತಮ್ಮ ಆದಾಯವನ್ನು ಗಿಟ್ಟಿಸಿಕೊಳ್ಳುತ್ತಾರೆ. ಹೀಗಾಗಿ, ಇಲ್ಲಿಯೂ ಕೂಡ ನಿಂತ ಮಳೆ ನೀರನ್ನು ಬಳಕೆ ಮಾಡಿಕೊಂಡು ನೀರಾವರಿಯನ್ನು ಹೆಚ್ಚಿಗೆ ಮಾಡಲು ಇಸ್ರೇಲ್ ಪದ್ಧತಿ ಜಾರಿಗೆ ಮಾಡಲಾಗುತ್ತಿದೆ. ಇದೇ ಪದ್ಧತಿ ಇಲ್ಲಿ ಅಳವಡಿಸಿಕೊಂಡರೆ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯಾಗಲಿದೆ ಅನ್ನೋದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗೂರು ಮಾಹಿತಿ ನೀಡಿದ್ದಾರೆ.
ರೈತರಿಗೆ ವಿದೇಶಿ ಪ್ರವಾಸ ಭಾಗ್ಯ
ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯ ವಿಧಾನಗಳನ್ನು ಅರಿತುಕೊಳ್ಳಲು ಮೊದಲ ಹಂತದಲ್ಲಿ ಆಯ್ದ ರೈತರಿಗೆ ಇಸ್ರೇಲ್ ಪ್ರವಾಸ ಆಯೋಜಿಸುವ ಚಿಂತನೆ ನಡೆದಿದೆ. ಜಿಲ್ಲೆಯಲ್ಲಿ ತೊಗರಿ ಬೆಳದರೇ ಪ್ರತಿ ಎಕರೆಗೆ ಯಾವ ಆದಾಯ ಬರುತ್ತದೆಯೋ, ಅದನ್ನೆ ಗ್ರೀನ್ ಹೌಸ್ ಮಾಡಿ ಇಸ್ರೇಲ್ ಮಾದರಿ ವ್ಯವಸಾಯ ಮಾಡಿದಾಗ ಎಷ್ಟು ಹೆಚ್ಚಿನ ಆದಾಯ ಬರುತ್ತದೆ ಎಂಬುದನ್ನು ತೋರಿಸುವ ಮುಖಾಂತರ ಸ್ಥಳೀಯ ರೈತರಿಗೆ ಈ ಯೋಜನೆಯತ್ತ ವಾಲುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.
ಕಡಿಮೆ ನೀರಿನಲ್ಲಿಯೇ ನೀರಾವರಿ ಯೋಜನೆ ಅಭಿವೃದ್ಧಿಪಡಿಸಿ ಬಹು ಬೆಳೆ ತೆಗೆಯುವ ಇಸ್ರೇಲ್ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರವೇ ಬರದನಾಡು ಕಲಬುರ್ಗಿಯಲ್ಲಿ ಹೊಸ ಕೃಷಿಕ್ರಾಂತಿಯಾಗಲಿದೆ.