ಕಲಬುರಗಿ: ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಈ ಮಾತಿಗೆ ಸೂಕ್ತವಾದ ವ್ಯಕ್ತಿ ಕಲಬುರಗಿಯ ಡಾ. ಮಲ್ಲಾರಾವ ಮಲ್ಲೆ ಅವರು. ಹತ್ತು ರೂಪಾಯಿ ಡಾಕ್ಟರ್ ಸಾಬ್ ಅಂತಾನೇ ಖ್ಯಾತಿ ಪಡೆದ ಡಾ. ಮಲ್ಲಾರಾವ ಮಲ್ಲೆ ಅವರ ಸೇವೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಶ್ಲಾಘನೆ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.
74ರ ಇಳಿವಯಸ್ಸಿನಲ್ಲಿಯೂ ಜನರ ಆರೋಗ್ಯಕ್ಕಾಗಿ ನಿಸ್ವಾರ್ಥದಿಂದ ಶ್ರಮಿಸುತ್ತಿರುವ ಡಾ. ಮಲ್ಲಾರಾವ ಮಲ್ಲೆ, ಇಂದಿನ ದುಬಾರಿ ದುನಿಯಾದಲ್ಲೂ ಕೇವಲ 10 ರೂಪಾಯಿ ಮಾತ್ರ ಕನ್ಸಲ್ಟೆನ್ಸಿ ಫೀಸ್ ಪಡೆಯುತ್ತಿದ್ದಾರೆ. 40 ವರ್ಷಗಳ ಸೇವಾ ಅನುಭವ ಹಾಗೂ ಇವರಲ್ಲಿನ ಜನ ಸೇವೆಯ ಮನೋಭಾವ, ಕಡಿಮೆ ಫೀಸ್, ಗುಣಮಟ್ಟದ ಚಿಕಿತ್ಸೆ ಸಲಹೆಯಿಂದಾಗಿ ದಿನಪೂರ್ತಿ ನಗರದ ಜಗತ್ ವೃತ್ತದಲ್ಲಿರುವ ಆಸ್ಪತ್ರೆ ಮುಂದೆ ಜನರು ಸರದಿ ಸಾಲಿನಲ್ಲಿ ನಿಂತಿರುತ್ತಾರೆ. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಇವರು ತೋರಿದ ಸೇವಾನಿಷ್ಠೆ ಸ್ಮರಣಿಯವಾಗಿದೆ.
ಮಹಾಮಾರಿ ಕೋವಿಡ್‌ಗೆ ಹೆದರಿ ಅದೆಷ್ಟೋ ಹಿರಿಯ ವೈದ್ಯರು ವೈದ್ಯ ಸೇವೆಯನ್ನೇ ನಿಲ್ಲಿಸಿದ್ದರು. ಆದರೆ, ಮಲ್ಲೆ ಅವರು ಮಾತ್ರ ಕೋವಿಡ್ ವಿರುದ್ಧ ತಮ್ಮ ಪ್ರಾಣ ಪಣಕ್ಕಿಟ್ಟು ಜನರ ಹಿತ ಕಾಪಾಡಿದ್ದಾರೆ. ಇಳಿ ವಯಸ್ಸಿನಲ್ಲಿಯೂ ದಣಿವು ಮರೆತು ಕೆಲಸ ಮಾಡಿದ ಡಾ.ಮಲ್ಲೆ, ಸುಮಾರು 2 ಲಕ್ಷ ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
’’ಸೇಂಟ್ ಜಾನ್ ಆ್ಯಂಬುಲೆನ್ಸ್" ಅಡಿ ಡಾ.ಮಲ್ಲೆ ಅವರು ನಡೆಸಿದ ಲಸಿಕಾ ಅಭಿಯಾನಕ್ಕೆ ಜನಸಾಮಾನ್ಯರಲ್ಲದೇ ಪ್ರಧಾನಿ ನರೇಂದ್ರ ಮೋದಿ ಕೂಡಾ ಪತ್ರ ಬರೆದು ಇವರ ಸೇವಾಪರತೆಯನ್ನು ಹಾಡಿ ಹೊಗಳಿದ್ದಾರೆ.
ನರೇಂದ್ರ ಮೋದಿ ಪತ್ರದಲ್ಲೇನಿದೆ?: ಭಾರತಕ್ಕೆ ಕೋವಿಡ್ ಸಂಕಷ್ಟ ಎದುರಾಗಿತ್ತು. ಇಂತಹ ಸಂದರ್ಭದಲ್ಲಿ ನಿಮ್ಮಂತಹ ದಿಟ್ಟ, ಜನಪರ ಹಾಗೂ ಸೇವಾಪರತೆಯ ವೈದ್ಯರು ದೇಶದ ಜನತೆಯ ಜೊತೆಗೆ ನಿಂತು ಮಹಾಮಾರಿಯಿಂದ ಎಲ್ಲರೂ ಪಾರಾಗುವಂತೆ ಮಾಡಿದ್ದೀರಿ. ನಿಮ್ಮ ಈ ಸೇವಾ ಪರತೆಗೆ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಪತ್ರದಲ್ಲಿ ಡಾ.ಮಲ್ಲೆ ಮತ್ತು ಅವರ ಕುಟುಂಬಕ್ಕೆ ಶುಭ ಕೋರಿದ್ದಾರೆ.
ಕೋವಿಡ್ ಕಾಲದ ಸಂಕಷ್ಟಗಳನ್ನೆಲ್ಲ ಮೆಟ್ಟಿನಿಲ್ಲುವಲ್ಲಿ ವೈದ್ಯರಾಗಿ ಕೋವಿಡ್ ಮುಂಚೂಣಿ ಸೈನಿಕರಾಗಿ ನೀವು ತೋರಿದ ಅಪ್ರತಿಮ ಧೈರ್ಯ ಹಾಗೂ ಸೇವೆಯ ಕಾರ್ಯಕ್ಕೆ ದೇಶ ಎಂದಿಗೂ ತಮಗೆ ಋಣಿಯಾಗಿದೆ. ದೇಶಕ್ಕೆ ಸಂಕಟ ಎದುರಾದಾಗ ನಿಮ್ಮಂತಹ ವೈದ್ಯರು ತೋರಿರುವ ಧೈರ್ಯ ಹಾಗೂ ಸಾಹಸ ಕಾರ್ಯಗಳು ಮುಂದಿನ ಪೀಳಿಗೆಗೆ ಮಾದರಿಯಾಗಲಿವೆ ಎಂದು ಮೋದಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಡಿಮೆ ಫೀಸ್ ಪಡೆದು ಬಡವರ ಬಗ್ಗೆ ತೋರುತ್ತಿರುವ ಕಾಳಜಿ, ಕೋವಿಡ್ ಸಂದರ್ಭದಲ್ಲಿ ತೋರಿಸಿದ ಸೇವಾಪರತೆ, ಜನರ ಆರೋಗ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಡಾ.ಮಲ್ಲೆ ಯುವಪೀಳಿಗೆಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ : 'ಐದು ರೂಪಾಯಿ ಡಾಕ್ಟರ್' ಶಂಕರೇಗೌಡರ ಜನ ಸೇವೆಗೆ ಸ್ಪೂರ್ತಿ ಯಾರು?: ಅವರೇ ಹೇಳ್ತಾರೆ ಕೇಳಿ!