ಕಲಬುರಗಿ: ಡಿಡಿಪಿಐ ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ಶುರುವಾಗಿದ್ದು, ವರ್ಗವಣೆಯಾಗಿ ಬಂದಿರುವ ನೂತನ ಡಿಡಿಪಿಐ, ಜಿಲ್ಲಾಧಿಕಾರಿ ಹಾಗೂ ಸಿಇಒ ಮಾತಿಗೆ ಸೊಪ್ಪು ಹಾಕದೆ ಅಧಿಕಾರ ವಹಿಸಿಕೊಳ್ಳುವ ಮೂಲಕ ಗೊಂದಲ ಉಂಟಾಗಿದೆ.
ಎಸ್.ಪಿ. ಬಡಾಗುಂದಿ ನೂತನ ಡಿಡಿಪಿಐ ಆಗಿ ಪದಗ್ರಹಣ ಮಾಡಿದ್ದಾರೆ. ಈ ಹಿಂದೆ ಕಲಬುರಗಿಯ ಡಿಡಿಪಿಐ ಆಗಿ ಶಾಂತಗೌಡ ಪಾಟೀಲ್ ಕರ್ತವ್ಯ ನಿರ್ವಹಿಸುತ್ತಿದ್ದರು. ಶಾಂತಗೌಡ ಪಾಟೀಲ್ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾರಿಗೆ ಮತ್ತು ವಸತಿ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈ ಮಧ್ಯೆ ನೂತನ ಡಿಡಿಪಿಐ ಆಗಿ ಅಧಿಕಾರ ವಹಿಸಿಕೊಳ್ಳಲು ವರ್ಗಾವಣೆ ಆದೇಶ ಪತ್ರದೊಂದಿಗೆ ಬಂದು, ಬಡಾಗುಂದಿ ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲಾಧಿಕಾರಿ ಶರತ್, ಸಿಇಒ ರಾಜಾ ಮತ್ತು ಶಿಕ್ಷಣ ಇಲಾಖೆ ಕಲಬುರಗಿ ಆಯುಕ್ತ ನಳಿನ್ ಅತುಲ್ ಅವರು ಸಮ್ಮೇಳನ ಮುಗಿಯುವವರೆಗೂ ತಾಳ್ಮೆಯಿಂದ ಇರುವಂತೆ ಬಡಾಗುಂದಿಗೆ ಸೂಚಿಸಿದ್ದರು. ಅಲ್ಲದೆ ಡಿಡಿಪಿಐ ಶಾಂತಗೌಡ ಪಾಟೀಲ್ ಅವರಿಗೂ ಸಮ್ಮೇಳನ ಮುಗಿಯುವ 8 ನೇ ತಾರೀಖಿನವರೆಗೆ ಅಧಿಕಾರ ಹಸ್ತಾಂತರಿಸದೆ ಮುಂದುವರಿಯುವಂತೆ ಹೇಳಿದ್ದಾರೆ.
ಆದ್ರೆ ನೂತನ ಡಿಡಿಪಿಐ ಬಡಾಗುಂದಿ ಮಾತ್ರ ಡಿಸಿ, ಸಿಇಒ ಮಾತಿಗೆ ಕವಡೆ ಕಾಸಿನ ಬೆಲೆ ಕೊಡದೆ, ಶಾಂತಗೌಡ ಪಾಟೀಲ್ ಅಧಿಕಾರ ಹಸ್ತಾಂತರ ಮಾಡದಿದ್ದರೂ ಸಹ ತಾವೇ ಡಿಡಿಪಿಐ ಕುರ್ಚಿಯಲ್ಲಿ ಕುಳಿತು ನೂತನ ಡಿಡಿಪಿಐ ಎಂದು ಘೋಷಿಸಿಕೊಂಡಿದ್ದಾರೆ. ಈ ವೇಳೆ ನೂತನ ಡಿಡಿಪಿಐ ಬಡಾಗುಂದಿ ಮತ್ತು ಶಾಂತಗೌಡ ಪಾಟೀಲ್ ಇಬ್ಬರ ಮಧ್ಯೆ ಡಿಡಿಪಿಐ ಕೊಠಡಿಯಲ್ಲಿ ಸಣ್ಣ ಗಲಾಟೆಯೂ ನಡೆದಿದೆ ಎನ್ನಲಾಗ್ತಿದೆ. ಹಳೆ ಡಿಡಿಪಿಐ ಶಾಂತಗೌಡ ಅವರ ಸಹಿ ಇಲ್ಲದೆ ಸ್ವಯಂ ಅಧಿಕಾರ ವಹಿಸಿಕೊಂಡ ಬಡಾಗುಂದಿ, ಡಿಸಿ, ಸಿಇಒ ಮತ್ತು ಆಯುಕ್ತ ನಳಿನ್ ಅತುಲ್ ಮಾತಿಗೆ ಬೆಲೆ ಕೊಟ್ಟಿಲ್ಲ. ಸದ್ಯ ಯಾರು ಡಿಡಿಪಿಐ ಎನ್ನುವ ಬಗ್ಗೆ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.