ಕಲಬುರಗಿ:ಪ್ರಧಾನಿ ಮೋದಿ ವಿದೇಶಗಳಿಗೆ ತೆರಳಿದರೆ ಬುದ್ಧನ ಹೆಸರು ಪ್ರಸ್ತಾಪಿಸಿ ಶಾಂತಿಮಂತ್ರ ಜಪಿಸುತ್ತಾರೆ. ಸ್ವದೇಶಕ್ಕೆ ಬಂದರೆ ಯುದ್ಧದ ಬಗ್ಗೆ ಮಾತನಾಡುತ್ತಾರೆ. ಮೋದಿ ಹೇಳೋದು ಒಂದು, ಮಾಡೋದು ಇನ್ನೊಂದು, ನಡೆದುಕೊಳ್ಳೋದು ಮಗದೊಂದು ರೀತಿ ಎಂದು ಜೆಎನ್ಯು ಮಾಜಿ ವಿದ್ಯಾರ್ಥಿ ಮುಖಂಡ, ಸಿಪಿಐ ನಾಯಕ ಕನ್ಹಯ್ಯಕುಮಾರ್ ಲೇವಡಿ ಮಾಡಿದ್ದಾರೆ.
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳಲು ನಗರಕ್ಕೆ ಆಗಮಿಸಿದ ಕನ್ಹಯ್ಯಕುಮಾರ್, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸರ್ಕಾರ ದಿಢೀರ್ ರದ್ದುಗೊಳಿಸಿ, ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ನನ್ನ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಯಾಕೆ ಈ ರೀತಿಯ ಸಮಸ್ಯೆ ಸೃಷ್ಟಿಸುತ್ತಿದ್ದಾರೋ ಗೊತ್ತಿಲ್ಲ. ಸಾರ್ವಜನಿಕ ಹಣದಿಂದ ನಡೆಯುವ ವಿಶ್ವವಿದ್ಯಾಲಯದಲ್ಲಿ ಬೇರೆ ಯಾವುದೇ ಪಕ್ಷದ ನಾಯಕರು ಮಾತನಾಡೋದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಹೀಗಿರಬೇಕಾದರೆ ನನಗೇಕೆ ಅನುಮತಿ ನಿರಾಕರಿಸಲಾಗಿದೆ ಎಂದು ಪ್ರಶ್ನಿಸಿದರು. ನಮ್ಮ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ. ಕೇಳದಿದ್ರೆ ಎಂ ಎಂ ಕಲಬುರಗಿ ರೀತಿಯಲ್ಲಿ ಹತ್ಯೆ ಮಾಡುವ ಮೂಲಕ ಸಂಪೂರ್ಣವಾಗಿ ಧ್ವನಿ ಹತ್ತಿಕ್ಕುವ ಕಾರ್ಯ ಮಾಡಲಾಗುತ್ತದೆ ಎಂದು ಆರೋಪಿಸಿದರು.
ಸಿಬಿಐ ಮತ್ತು ಇಡಿಯಂತಹ ಸ್ವಾಯತ್ತ ಸಂಸ್ಥೆಗಳ ಮೂಲಕ ಪ್ರತಿಪಕ್ಷದ ನಾಯಕರನ್ನು ಬಗ್ಗುಬಡಿಯಲು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕನ್ಹಯ್ಯಕುಮಾರ್ ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ. ನಿರಾಧಾರ ಆರೋಪ ಮಾಡೋದು, ಹೆದರಿಸೋದು ಸರಿಯಾದ ಕ್ರಮವಲ್ಲ. ಆಧಾರಗಳಿದ್ದರೆ ಬಂಧಿಸಿ, ನ್ಯಾಯಾಲಯದಲ್ಲಿ ವಿಚಾರಣೆಯಾಗಲಿ. ಅದನ್ನು ಬಿಟ್ಟು ವಿರೋಧಿಗಳನ್ನು ತೇಜೋವಧೆ ಮಾಡುವುದು ಸರಿಯಲ್ಲ. ಪ್ರಧಾನಿ ಮೋದಿ ಇಡೀ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಕ್ಕಕ್ಕೆ ಸರಿಸಿ, ಪೊಲೀಸ್ ವ್ಯವಸ್ಥೆಯನ್ನು ಜಾರಿಗೆತರಲು ಹೊರಟಿದ್ದಾರೆ ಎಂದು ಕಿಡಿಕಾರಿದರು.