ಕಲಬುರಗಿ: ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಬೇಜವಾಬ್ದಾರಿಯಿಂದ ವರ್ತಿಸೋದು ನಾಚಿಕೆಗೇಡಿತನದ ವಿಚಾರ ಅಂತ ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಸಿದ್ದರಾಮಯ್ಯ ವಿರುದ್ಧ ಕಲಬುರಗಿಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಮೇಕೆದಾಟು ಪಾದಯಾತ್ರೆ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ನಿಂದಾಗಿ ಇಡೀ ಜಗತ್ತಿನ ಜನರು ತತ್ತರಿಸಿ ಹೋಗಿದ್ದಾರೆ. ರಾಜ್ಯದಲ್ಲಿ ತ್ವರಿತ ಗತಿಯಲ್ಲಿ ಸೋಂಕು ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಜನರನ್ನು ಒಟ್ಟುಗೂಡಿಸಿ ಪಾದಯಾತ್ರೆ ಮಾಡುವುದು ಸರಿಯಲ್ಲ, ಕಾಂಗ್ರೆಸ್ ಪಕ್ಷದ ಬೇಜವಾಬ್ದಾರಿ ವರ್ತನೆ ಖಂಡಿಸುತ್ತೇನೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಸರ್ಕಾರ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎಫ್ಐಆರ್ ಕೂಡಾ ದಾಖಲು ಮಾಡಲಾಗಿದೆ ಎಂದರು.
ತಾಕತ್ತು ಪ್ರಶ್ನಿಸಿದ ಡಿಕೆಶಿಗೆ ತಿರುಗೇಟು:
ತಾಕತ್ತು ಇದ್ರೆ ಟಚ್ ಮಾಡಿ ನೋಡಿ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಕೆಶಿ ಟಚ್ ಮಾಡೋಕೆ ಆಗೋದಿಲ್ಲ ಅಂತ ಹೇಳ್ತಾರೆ. ಟಚ್ ಮಾಡಿರೋದಕ್ಕೆ ಎಲ್ಲಿಗೆ ಹೋಗಿ ಬರಬೇಕೋ ಅಲ್ಲಿಗೆ ಹೋಗಿ ಬಂದಿದ್ದಾರೆ. ಸರ್ಕಾರ ಯಾರಿಗೂ ಹೆದರಲ್ಲ. ಕೊರೊನಾ ಬಂದು ಜನ ಸತ್ತರು. ಆದರೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ಇವರ ಕೆಲಸವಾಗಿದೆ ಎಂದು ತಿರುಗೇಟು ನೀಡಿದರು. ಸರ್ಕಾರ ಮತ್ತು ಕಾನೂನಿನ ತಾಕತ್ತು ಪ್ರಶ್ನೆ ಮಾಡುತ್ತಾರೆ. ಇದು ಮಾನವೀಯ ಸಂಸ್ಕೃತಿ ಅಲ್ಲ, ಗೂಂಡಾಗಿರಿ ಸಂಸ್ಕೃತಿ ಎಂದು ಕಿಡಿಕಾರಿದರು.
ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಬದ್ಧ:
ಮೇಕೆದಾಟು ಯೋಜನೆ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ. ಕಾಂಗ್ರೆಸ್ನವರು ಬೇಕಾದ್ರೆ ತಮಿಳುನಾಡು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ. ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡೋದಲ್ಲ. ಮಹಾದಾಯಿ ವಿಚಾರದಲ್ಲಿ ಹಿಂದೆ ಸೋನಿಯಾ ಗಾಂಧಿ ಹನಿ ನೀರು ಕೋಡೋದಿಲ್ಲ ಅಂತ ಹೇಳಿದ್ದರು. ಆ ಬಗ್ಗೆ ಕಾಂಗ್ರೆಸ್ ಚಕಾರ ಕೂಡ ಎತ್ತತ್ತಿಲ್ಲ. ಐದು ವರ್ಷ ಕಾಂಗ್ರೆಸ್ ಸರ್ಕಾರ ಇತ್ತು, ಡಿಕೆಶಿ ನೀರಾವರಿ ಸಚಿವರಾಗಿದ್ದರು, ಆವಾಗ ಏನೂ ಮಾಡಲಿಲ್ಲ. ಈಗ ಸಿದ್ದರಾಮಯ್ಯ ಮೇಲಿನ ಸೇಡಿಗೆ ಡಿಕೆಶಿ ತಮ್ಮ ತವರಿನಲ್ಲಿ ದುಡ್ಡು ಖರ್ಚು ಮಾಡಿ ಶಕ್ತಿ ತೋರಿಸುತ್ತಿದ್ದಾರೆ. ಇದು ರಾಜಕೀಯ ದುರುದ್ದೇಶದ ಮೂರ್ಖತನದ ಪರಮಾವಧಿ ಎಂದು ಸಚಿವ ಬಿ ಸಿ ಪಾಟೀಲ್ ಟೀಕಿಸಿದರು.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಪ್ರತಿಪಕ್ಷ, ಸರ್ಕಾರಕ್ಕೆ ಹೈಕೋರ್ಟ್ ತರಾಟೆ