ಕಲಬುರಗಿ : ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಆಳಂದ ಚಲೋ ಹಿನ್ನೆಲೆ ನಗರದ ಕೆಲ ದೇವಸ್ಥಾನಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ಹೇರಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ನಗರದ ರಿಂಗ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರ ಹಾಗೂ ಶರಣಬಸವೇಶ್ವರ ದೇವಸ್ಥಾನ ಮತ್ತು ವಿಶ್ವರಾಧ್ಯ ದೇವಸ್ಥಾನದ 100 ಮೀಟರ್ ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ಹೇರಲಾಗಿದೆ.
ಇಂದಿನಿಂದ ಬೆಳಗ್ಗೆ 6 ಗಂಟೆಯಿಂದ ಮಾರ್ಚ್ 3ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಮಹಾಶಿವರಾತ್ರಿ ನಿಮಿತ್ತ ಆಳಂದ ಪಟ್ಟಣದ ರಾಘವ ಚೈತನ್ಯ ಶಿವಲಿಂಗ ಶುದ್ಧೀಕರಣಕ್ಕಾಗಿ, ಶಿವಮಾಲಾ ಧರಿಸಿಕೊಂಡು ನೂರಾರು ಜನ ಹಿಂದು ಕಾರ್ಯಕರ್ತರು ಆಳಂದ ಚಲೋ ಹಮ್ಮಿಕೊಂಡಿದ್ದಾರೆ.
ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ರಾಘವ ಚೈತನ್ಯ ಶಿವಲಿಂಗ ಇದೆ. ದರ್ಗಾದಲ್ಲಿ ನಾಳೆಯೇ ಸಂದಾಲ್ ಮತ್ತು ಶಬ್ ಏ ಬಾರಾತ್ ಉರುಸ್ ಕೂಡ ಇದೆ. ಸಾವಿರಾರು ಜನ ಸೇರುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಈಗಾಗಲೇ ಆಳಂದ ತಾಲೂಕಿನಲ್ಲಿ 144 ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದಾರೆ.
ದೇವಸ್ಥಾನಗಳ ಮಾರ್ಗದ ಮೂಲಕ ಆಳಂದ ಚಲೋ ನಡೆಯಲಿದ್ದು, ಈ ಹಿನ್ನೆಲೆ ದೇವಸ್ಥಾನಗಳ ಬಳಿ ಗುಂಪಾಗಿ ಜನ ಸೇರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ವೈಎಸ್ ರವಿಕುಮಾರ ಆದೇಶ ಹೊರಡಿಸಿದ್ದಾರೆ.
ಓದಿ :ಮಹಾಶಿವರಾತ್ರಿ ಸಂಭ್ರಮ..ದೇವಸ್ಥಾನಗಳಿಗೆ ಆಗಮಿಸುತ್ತಿರುವ ಭಕ್ತಗಣ