ಕಲಬುರಗಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುವ ಸುಳಿವು 8 ದಿನ ಮುಂಚೆಯೇ ಸಿಕ್ಕಿತ್ತು. ಆದ್ರೆ ಹಾಗೇನು ಆಗುವುದಿಲ್ಲ ಎಂದು ಅಲ್ಲಿನ ಕಾಲೇಜು ಹೇಳಿದ ಕಾರಣ ನಮ್ಮ ಮಗ ಉದ್ಧಪೀಡಿತ ದೇಶದಲ್ಲೇ ಸಿಲುಕುವಂತಾಗಿದೆ ಎಂದು ಉಕ್ರೇನ್ನಲ್ಲಿರುವ ಕಲಬುರಗಿ ವಿದ್ಯಾರ್ಥಿ ಪ್ರಜ್ವಲ್ಕುಮಾರ ಅವರ ತಂದೆ ಮಲ್ಲಿನಾಥ ಗುಬ್ಯಾಡ್ ಆತಂಕ ವ್ಯಕ್ತಪಡಿಸಿದ್ದಾರೆ.
'ಈಟಿವಿ ಭಾರತ' ಜೊತೆ ಮಾತನಾಡಿದ ಮಲ್ಲಿನಾಥ್ ಅವರು, ತಮ್ಮ ಪುತ್ರ ಉಕ್ರೇನ್‌ನಲ್ಲಿ ಸಿಲುಕಲು ಅಲ್ಲಿನ ಮೆಡಿಕಲ್ ಕಾಲೇಜ್ ಕಾರಣ. ಕಾಲೇಜಿನ ನಿರ್ದೇಶನದಿಂದ ನರಕ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಮುತುವರ್ಜಿ ವಹಿಸಿ ಮಕ್ಕಳನ್ನು ಕರೆ ತರಬೇಕೆಂದು ಒತ್ತಾಯಿಸಿದರು.
ಕಳೆದ 3 ವರ್ಷಗಳಿಂದ ಉಕ್ರೇನ್‌ನ ಮೈಕೋಲಿವ್ ಸಿಟಿಯಲ್ಲಿ ಪ್ರಜ್ವಲ್ ಎಂಬಿಬಿಎಸ್ ಓದುತ್ತಿದ್ದಾರೆ. ರಜೆಗೆ ಆಗಮಿಸಿ ಕಳೆದ ಜುಲೈ ವರ್ಷ ತಿಂಗಳಿನಲ್ಲಿ ಉಕ್ರೇನ್ಗೆ ತೆರಳಿದ್ದರು. ಪೆಟ್ರೋ ಮೋಯಾಲಾ ಬ್ಲ್ಯಾಕ್ ಸೀ ನ್ಯಾಷನಲ್ ವಿಶ್ವವಿದ್ಯಾಲಯದಲ್ಲಿ ಪ್ರಜ್ವಲ್ ವ್ಯಾಸಂಗ ಮಾಡುತ್ತಿದ್ದಾರೆ. ಯುದ್ಧ ಭೀತಿ ಮಧ್ಯೆಯೂ ವಿವಿ ತರಗತಿಗಳನ್ನು ನಡೆಸಿದ್ದಲ್ಲದೇ, ಪರೀಕ್ಷೆಗೂ ಸಿದ್ಧವಾಗಿತ್ತು. ಇದರಿಂದ ಪ್ರಜ್ವಲ್ ಅಲ್ಲಿಯೇ ಉಳಿದುಕೊಂಡು ಈಗ ಪರದಾಡುವಂತಾಗಿದೆ ಎಂದು ಕಣ್ಣೀರಿಟ್ಟರು.
ಎರಡು ದಿನದ ಹಿಂದೆ ಪ್ರಜ್ವಲ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಆದರೀಗ ಸಂಪರ್ಕ ಸಾಧಿಸಲು ಆಗುತ್ತಿಲ್ಲ. ಕೇವಲ ಮೆಸೇಜ್ ಮಾಡಿ ತಾನು ಸೇಫ್ ಇರುವುದಾಗಿ ತಿಳಿಸಿದ್ದಾನೆ. ಆದರೂ ಸಹ ಪೋಷಕರ ಆತಂಕ ದೂರವಾಗಿಲ್ಲ.
ಓದಿ: ಉಕ್ರೇನ್‌ನಲ್ಲಿ ಬಲಿಯಾದ ಹಾವೇರಿಯ ನವೀನ್ SSLCಯಲ್ಲಿ ಟಾಪರ್, ಪಿಯುನಲ್ಲಿ ಶೇ.97ರಷ್ಟು ಅಂಕ..!