ಸೇಡಂ : ಶುಕ್ರವಾರ ಸಂಜೆ ಪಟ್ಟಣದಲ್ಲಿ ನಡೆದ ಯುವಕನ ಕೊಲೆ ಪ್ರಕರಣ ತಿರುವು ಪಡೆದುಕೊಂಡಿದೆ. ಹತ್ಯೆಗೆ ಪ್ರೀತಿ ವಿಚಾರವೇ ಕಾರಣ ಎಂದು ತಿಳಿದು ಬಂದಿದೆ. ಪ್ರೀತಿಸಿದ ಹುಡುಗಿಯ ತಂದೆಯೇ ಕೊಲೆಗೆ ಸುಪಾರಿ ನೀಡಿದ್ದ ಎಂಬ ಅಂಶ ಪೊಲೀಸ್ ತನಿಖೆಯ ವೇಳೆ ಹೊರ ಬಿದ್ದಿದೆ.
ಕೊಲೆಯಾದ ಯುವಕ ಕಿರಣ್ ದೊಡ್ಡಮನಿ ಹಲವು ದಿನಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಈ ವಿಷಯ ಯುವತಿಯ ತಂದೆ ಪರಮೇಶ್ವರ ಪಾಟೀಲ್ ಎಂಬುವರಿಗೆ ತಿಳಿದಿತ್ತು.
ಇದರಿಂದ ಕೋಪಗೊಂಡ ಪರಮೇಶ್ವರ್, ಅಭಿಷೇಕ, ಮಲ್ಲಿಕಾರ್ಜುನ (20), ಸಚಿನ ಕುರಕುಂಟಾ (20) ಹಾಗೂ ಅಜಯ (20) ಎಂಬ ಯುವಕರಿಗೆ ಕಿರಣ್ನನ್ನು ಮುಗಿಸಲು ಎರಡು ಲಕ್ಷಕ್ಕೆ ಸುಪಾರಿ ಕುದುರಿಸಿದ್ದ ಎನ್ನಲಾಗಿದೆ.
ಸೇಡಂ ಯುವಕನ ಕೊಲೆ ಡೀಲ್ : ಯುವಕನ ಕೊಲೆಗೆ ಹಂತಕರು ಐದು ಲಕ್ಷದ ಬೇಡಿಗೆ ಇಟ್ಟಾಗ, ಎರಡು ಲಕ್ಷಕ್ಕೆ ಡೀಲ್ ಮುಗಿದಿತ್ತು. ಅಲ್ಲದೆ, ಮುಂಗಡವಾಗಿ ಯುವತಿಯ ತಂದೆ ₹30 ಸಾವಿರ ಸಹ ನೀಡಿದ್ದ. ಇನ್ನುಳಿದ ಹಣವನ್ನು ಕೆಲಸ ಮುಗಿದ ಬಳಿಕೆ ನೀಡುವುದಾಗಿ ಮಾತುಕತೆಯಾಗಿತ್ತು ಎಂದು ತಿಳಿದು ಬಂದಿದೆ. ಕಡೆಗೂ ಹೊಂಚು ಹಾಕಿ ಕುಳಿತಿದ್ದ ಕೊಲೆಗಡುಕರು ಕಿರಣ್ನನ್ನು ಪ್ರೀತಿಯಿಂದ ಮಾತನಾಡಿಸಿದಂತೆ ನಟಿಸಿ, ಚಾಕು ಇರುದು ಕೊಲೆ ಮಾಡಿದ್ದರು.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿ ನಾಪತ್ತೆಯಾಗಿದ್ದು, ಡಿಎಸ್ಪಿ ಬಸವೇಶ್ವರ, ಸಿಪಿಐ ರಾಜಶೇಖರ ಹಳಗೋದಿ, ಪಿಎಸ್‌ಐ ಸೋಮಲಿಂಗ ಒಡೆಯರ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮೃತದೇಹ ಬಿಜಾಪುರಕ್ಕೆ: ಕೊಲೆಯಾದ ಕಿರಣ ಮೂಲತಃ ವಿಜಯಪುರ ಜಿಲ್ಲೆ ನಿವಾಸಿ. ಸೇಡಂನ ಸ್ಥಳೀಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಯ ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆ ಹಾಗೂ ಸರಕಾರಿ ಆಸ್ಪತ್ರೆ ಎದುರು ನೂರಾರು ಜನ ಜಮಾಯಿಸಿದ್ದರು.
ತಡರಾತ್ರಿ ಪೊಲೀಸರೊಂದಿಗೆ ವಾಗ್ವಾದವೂ ನಡೆದಿತ್ತು. ಕಡೆಗೂ ಆಂಬುಲೆನ್ಸ್ನಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ವಿಜಯಪುರಕ್ಕೆ ಶವ ರವಾನಿಸಲಾಗಿದೆ.