ಕಲಬುರ್ಗಿ: ಮಳೆ ನೀರು ಹರಿಯುವ ಪೈಪ್ನಲ್ಲಿ ಹಣದ ಕಂತೆಗಳನ್ನು ಹಾಕಿ ಸುದ್ದಿಯಾಗಿದ್ದ ಜೇವರ್ಗಿ ಪಿಡಬ್ಲ್ಯೂಡಿ ಜ್ಯೂನಿಯರ್ ಇಂಜಿನಿಯರ್ ಶಾಂತಗೌಡ ಬಿರಾದಾರ್ ಆಸ್ತಿ ಬಗೆದಷ್ಟೂ ಪತ್ತೆ ಆಗುತ್ತಲೇ ಇದೆ. ದುಬೈನಿಂದ ಚಿನ್ನದ ಗಟ್ಟಿಯನ್ನು ಖರೀದಿಸಿದ ರಹಸ್ಯ ಇದೀಗ ಬಹಿರಂಗವಾಗಿದೆ.
ಇದಕ್ಕೂ ಮುನ್ನ ಶಾಂತಗೌಡ ಬಿರಾದಾರ್ಗೆ ಸೇರಿದ ಕಲಬುರಗಿಯ ಗುಬ್ಬಿ ಕಾಲೋನಿ ಮನೆಯಲ್ಲಿ ಲಕ್ಷ ಲಕ್ಷ ನಗದು ಹಣ ಪತ್ತೆಯಾಗಿತ್ತು. ಅದಕ್ಕಿಂತಲೂ ಹೆಚ್ಚು ಬೆಂಗಳೂರಿನ ಮನೆಯಲ್ಲಿದೆ ಎಂದು ಹೇಳಲಾಗಿದೆ. ಮಗನ ಹೆಸರಿನಲ್ಲಿ ದುಬೈನಿಂದ ಚಿನ್ನದ ಗಟ್ಟಿಯನ್ನು ಖರೀದಿಸಿರುವ ದಾಖಲೆ ಎಸಿಬಿ ಅಧಿಕಾರಿಗಳ ಸಿಕ್ಕಿದೆ. ಇದರಿಂದ ಬೆಂಗಳೂರಿನ ಮನೆಯನ್ನು ಶೋಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ತಂದೆಗಿಂತ ಮಗನೇ ಅತಿ ಶ್ರೀಮಂತ:
ಶಾಂತಗೌಡನ ಬೆವರಿಳಿಸಿರುವ ಎಸಿಬಿಗೆ ಮೊದಲ ದಿನವೇ 54 ಲಕ್ಷ ನಗದು ಮನೆಯಲ್ಲಿ ಪತ್ತೆಯಾಗಿತ್ತು. ಶಾಂತಗೌಡ ಹಾಗೂ ಆತನ ಕುಟುಂಬಸ್ಥರ ಬ್ಯಾಂಕ್ ಖಾತೆಗಳನ್ನು ಜಾಲಾಡಿದ ಎಸಿಬಿಗೆ ಬ್ಯಾಂಕ್ ಖಾತೆಗಳಲ್ಲಿ ಲಕ್ಷಗಟ್ಟಲೇ ಹಣ ಪತ್ತೆಯಾಗಿದೆ. ಎಸ್‌ಬಿಐ, ಕೆನರಾ ಬ್ಯಾಂಕ್ ಸೇರಿದಂತೆ 16 ಬ್ಯಾಂಕ್‌ಗಳಲ್ಲಿ ಅಕೌಂಟ್ ಹೊಂದಿರುವ ಶಾಂತಗೌಡ ಹಾಗೂ ಆತನ ಮಗನಿಗೆ ಸೇರಿದ 50 ಲಕ್ಷ ಹಣವನ್ನು ಪತ್ತೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ವಿಶೇಷ ಅಂದ್ರೆ, ತಂದೆಗಿಂತ ಪುತ್ರನ ಅಕೌಂಟ್ನಲ್ಲಿಯೇ ಅತಿ ಹೆಚ್ಚು ಹಣ ಇರುವುದು ಗೊತ್ತಾಗಿದೆ.
ಎಸಿಬಿ ಕೈ ಸೇರಿದ ದುಬೈ ಚಿನ್ನದ ಗಟ್ಟಿ ದಾಖಲೆ:
ಕಳೆದ 4 ವರ್ಷದಿಂದ ಶಾಂತಗೌಡ ಕುಟುಂಬ ಬೆಂಗಳೂರಿನಲ್ಲಿ ವಾಸವಿದೆ. ಅಲ್ಲಿಯ ಆಸ್ತಿ ಪತ್ತೆಗೆ ಡಿವೈಎಸ್ಪಿ ನೇತೃತ್ವದ ತಂಡ ಬೆಂಗಳೂರಿಗೆ ತೆರಳಿದೆ. ಬೆಂಗಳೂರಿನ ಜಯನಗರದಲ್ಲಿರುವ ಮನೆಯನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ. ಮಗನ ಹೆಸರಿನಲ್ಲಿ ದುಬೈನಿಂದ ಚಿನ್ನದ ಗಟ್ಟಿ ಖರೀದಿ ಮಾಡಿರುವ ದಾಖಲೆ ಎಸಿಬಿಗೆ ಲಭ್ಯವಾಗಿದೆ. ಇದು ಶಾಂತಗೌಡರು ಇನ್ನಷ್ಟು ಕುಬೇರರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ನುಂಗಣ್ಣ ಶಾಂತಗೌಡ ದೈವ ಭಕ್ತ:
ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿರುವ ಶಾಂತಗೌಡ ಬಿರಾದಾರ್ ಕಲಬುರ್ಗಿ ಜಿಲ್ಲೆ ಹಂಗರಗಾ.ಬಿ. ಗ್ರಾಮದಲ್ಲಿರುವ ಪಾರ್ಮ್ ಹೌಸ್ನಲ್ಲಿಯೂ ಐಷಾರಾಮಿ ಮನೆ ಕಟ್ಟಿದ್ದಾನೆ. ತನ್ನ ಪುತ್ರಿ ನೆನಪಿಗಾಗಿ ಆಶ್ರಮವನ್ನು ಆರಂಭಿಸಿದ್ದಾರೆ. ದೈವ ಭಕ್ತರಾದ ಶಾಂತಗೌಡ ಆಶ್ರಮದ 2 ಎಕರೆ ಜಾಗವನ್ನು ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ದಾನ ನೀಡಿದ್ದಾರೆ.
ಜೈಲಲ್ಲಿಯೇ ಶಾಂತಗೌಡಗೆ ಚಿಕಿತ್ಸೆ:
14 ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಶಾಂತಗೌಡ ಬಿರಾದಾರ್ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರಿಗೆ ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ. ಹೊರಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಶಾಂತಗೌಡ ಮನವಿ ಮಾಡಿದ್ದಾರೆ. ಆದರೆ, ಜೈಲಿನ ವೈದ್ಯರ ತಂಡ ಹೊರ ಚಿಕಿತ್ಸೆ ಬೇಡವೆಂದು ಅಭಿಪ್ರಾಯಪಟ್ಟಿದ್ದಾರೆ.
ಶಾಂತಗೌಡ ಮೇಲೆ ಎಸಿಬಿ ದಾಳಿಯಿಂದ 4 ಕೋಟಿ ರೂಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇದು ಸಂಪಾದನೆಗಿಂತ 400 ಪಟ್ಟು ಹೆಚ್ಚಿನ ಆಸ್ತಿಯಾಗಿದೆ. ಆದರೆ ಪತ್ತೆಯಾಗಿರುವ ಆಸ್ತಿ ಅಕ್ರಮವೇ, ಸಕ್ರಮವೇ ಎಂಬುದು ತನಿಖೆ ಬಳಿಕ ತಿಳಿಯಲಿದೆ.