ಕಲಬುರಗಿ: ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಪರವಾದ ಅಲೆ ಇದೆ. ಹೋದಲ್ಲೆಲ್ಲ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಹೀಗಾಗಿ ಜಾಧವ್ ಅವರು ಗೆಲ್ಲುತ್ತಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಲೋಕಸಭೆ ಸಂಸದರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೊಳ್ಳುವ ಕೆಲಸವೇನೂ ಮಾಡಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳನ್ನು ತಮ್ಮವು ಎಂದು ಹೇಳಿಕೊಳ್ಳುತ್ತಿದ್ದಾರೆ. 45 ವರ್ಷಗಳಿಂದ ರಾಜಕೀಯ ಮಾಡುತ್ತಿರುವವರು ಇಲ್ಲಿಯತನಕ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬೇಕಿತ್ತು. ಆದರೆ ಅಷ್ಟೊಂದು ಅಭಿವೃದ್ಧಿ ಆಗಿಲ್ಲ. ಹೈದರಾಬಾದ್ ಕರ್ನಾಟಕ ಹಿಂದುಳಿಯಲು ಖರ್ಗೆ ಅವರೇ ಕಾರಣ ಎಂದು ಆರೋಪಿಸಿದರು.
ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಭಾಗದ ಅಭಿವೃದ್ಧಿಗಾಗಿ ಕೋಟಿಗಟ್ಟಲೆ ಅನುದಾನ ಕೊಟ್ಟಿದ್ದಾರೆ. ಅದುವೇ ನಮ್ಮ ಅಭ್ಯರ್ಥಿಗೆ ಶ್ರೀರಕ್ಷೆಯಾಗಲಿದೆ ಎಂದರು.
371ಜೆ ಕಲಂ ಜಾರಿಯಲ್ಲಿ ಕೇವಲ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ಕೊಡುಗೆ ಅಷ್ಟೇ ಅಲ್ಲ, ಬಿಜೆಪಿ ನಾಯಕರ ಶ್ರಮವೂ ಇದೆ ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು. ನಾನು ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಇಲ್ಲಿನ ಜನರು ಕೂಡ ನನಗೆ ಚಿರಪರಿಚಿತರು. ಬಿಜೆಪಿ ಪಕ್ಷಕ್ಕೆ ಮತ ನೀಡಿ ಮತ್ತೊಮ್ಮೆ ಮೋದಿ ಕೈ ಬಲಪಡಿಸಿ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.