ಕಲಬುರಗಿ: ಆತ ಮೂರರ ಪೋರ. ತಂದೆ-ತಾಯಿ ಒಂದು ಬಾರಿ ಹೇಳಿಕೊಟ್ಟಿದ್ದನ್ನು ಹಾಗೇ ನೆನಪಿಟ್ಟುಕೊಳ್ಳುವ ಬಾಲಕ. ಏನೇ ಕೇಳಿದ್ರೂ ಪಟ ಪಟ ಅಂತಾ ಉತ್ತರ ಕೊಡೋ ಚಾಣಾಕ್ಷತನ ಈ ಬಾಲಕನದ್ದು. ಈ ರೀತಿ ಅಗಾಧ ಜ್ಞಾಪಕ ಶಕ್ತಿ ಮತ್ತು ಅಪ್ರತಿಮ ಜ್ಞಾನದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾನೆ.
ಕಲಬುರಗಿ ನಗರದ ಸಂತೋಷ್ ಕಾಲೋನಿಯ ನಿವಾಸಿಗಳಾದ ಶ್ವೇತಾ-ಶಿವಕುಮಾರ್ ದಂಪತಿಯ ಪುತ್ರ ಸಾತ್ವಿಕ್ ಅಗಾಧ ಜ್ಞಾಪಕ ಶಕ್ತಿಯಿಂದ ಸಾಧನೆಗೈದಿದ್ದಾನೆ. ಏನೇ ಕೇಳಿದ್ರೂ ಪಟ ಪಟ ಅಂತ ಉತ್ತರ ಕೊಡೋ ಈ ಹುಡುಗನಿಗೆ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಲಭಿಸಿದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್..
ಸಾತ್ವಿಕ್ ಒಂದೂವರೆ ವರ್ಷದ ಮಗುವಿದ್ದಾಗಲೇ ಸಾಕಷ್ಟು ಕಲಿಯೋ ಆಸಕ್ತಿ ಹೊಂದಿದ್ದ. ಮಗುವಿನ ಆಸಕ್ತಿಗೆ ತಕ್ಕಂತೆ ತಂದೆ-ತಾಯಿ ಕನ್ನಡ, ಇಂಗ್ಲಿಷ್ ಭಾಷೆ ಸೇರಿದಂತೆ ಜಾನಪದ ಸಂಗೀತ, ಸಿನಿಮಾ ಹಾಡುಗಳನ್ನು ಹೇಳಿಕೊಟ್ಟಿದ್ದಾರೆ. ಅಲ್ಲದೇ ಸಾಮಾನ್ಯ ಜ್ಞಾನವನ್ನು ಕರಗತಮಾಡಿಕೊಂಡಿದ್ದಾನೆ. ಆತನ ಜ್ಞಾಪಕ ಶಕ್ತಿ ಮತ್ತು ಜ್ಞಾನವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಕಳುಹಿಸಿಕೊಟ್ಟಿದ್ದರು. ಇದೀಗ ಮೂರು ವರ್ಷದ ಸಾತ್ವಿಕ್ ತನ್ನ ಅಪ್ರತಿಮ ಜ್ಞಾನದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪಡೆದಿದ್ದಾನೆ.
ಒಂದು ಬಾರಿ ಹೇಳಿಕೊಟ್ರೆ ಸಾಕು..
ಸಾತ್ವಿಕ್ ಅನ್ನು ಪೋಕಷರು ಹೊರಗಡೆ ಕರೆದುಕೊಂಡು ಹೋದಂತಹ ಸಂಧರ್ಭದಲ್ಲಿ ಅವರಿಗೆ ಸಾಕಷ್ಟು ಪ್ರಶ್ನೆ ಮಾಡ್ತಿದ್ದನಂತೆ. ಒಂದೊಂದಾಗೆ ಪೋಷಕರಿಂದ ಕೇಳಿ ತಿಳಿದುಕೊಳ್ಳುವ ಸಾತ್ವಿಕ್ ಅದೆಲ್ಲವನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳುತ್ತಾನೆ. ಪೋಷಕರು ಒಂದು ಬಾರಿ ಹೇಳಿಕೊಟ್ಟಿದ್ದನ್ನು ತಿಂಗಳ ನಂತರ ಕೇಳಿದ್ರೂ ಕೂಡ ಸರಿಯಾಗಿ ಉತ್ತರ ಕೊಡ್ತಾನೆ. ಮಗುವಿನ ಕಲಿಕೆಯ ಆಸಕ್ತಿಯನ್ನು ಕಂಡ ತಂದೆ-ತಾಯಿ ಸಾತ್ವಿಕ್ ಕೇಳಿದನ್ನೆಲ್ಲ ಕೊಡಿಸಿ ಆತನ ಪ್ರತಿಭೆ ಹೆಮ್ಮರವಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ 'ಏಕ್ ಲವ್ ಯಾ' ಆಡಿಯೋ ಬಿಡುಗಡೆ: ಅಪ್ಪು ನೆನೆದ ನಿರ್ದೇಶಕ ಪ್ರೇಮ್
ಶೈಕ್ಷಣಿಕವಾಗಿ ಹಿಂದುಳಿದಂತಹ ಕಲಬುರಗಿ ಜಿಲ್ಲೆಯ ಮೂರು ವರ್ಷದ ಸಾತ್ವಿಕ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿರೋದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಜಿಲ್ಲೆಯ ಜನರಿಂದ ಸಾತ್ವಿಕ್ ಸಾಧನೆಗೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.