ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತ, ಐಎಎಸ್ ಅಧಿಕಾರಿ ಸ್ನೇಹಲ್ ಲೊಖಂಡೆ ವಿರುದ್ಧ ಪ್ರೀತಿಸಿ ಬಳಿಕ ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
2017ರ ಬ್ಯಾಚ್ ಐಎಎಸ್ ಅಧಿಕಾರಿ ಆಗಿರುವ ಸ್ನೇಹಲ್ ಲೊಖಂಡೆ ತಮ್ಮ ತರಬೇತಿ ವೇಳೆ 2019ರಲ್ಲಿ ದೆಹಲಿ ಮೂಲದವಳಾದ ತನ್ನನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಂಡಿದ್ದರು. ಮದುವೆಯಾಗುವುದಾಗಿ ನಂಬಿಸಿ ಲಾಡ್ಜ್ ಹಾಗೂ ರೂಂಗೆ ಕರೆದುಕೊಂಡು ಹೋಗಿ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾರೆಂದು ಯುವತಿ ಆರೋಪಿಸಿದ್ದಾಳೆ.
ಯುವತಿ ತನ್ನ ಪೋಷಕರಿಗೆ ಈ ವಿಷಯ ತಿಳಿಸಿದ್ದಾಗ ಆಕೆಯ ಪೋಷಕರು ಸ್ನೇಹಲ್ ಲೊಖಂಡೆ ಅವರ ಕುಟುಂಬಸ್ಥರ ಗಮನಕ್ಕೆ ತಂದಿದ್ದಾರೆ. ಮಾತನಾಡಿ ಎಲ್ಲವನ್ನು ಸರಿಪಡಿಸುವ ಭರವಸೆ ನೀಡಿದ ಸ್ನೇಹಲ್ ತಂದೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯುವತಿ ಅಳಲು ತೋಡಿಕೊಂಡಿದ್ದಾಳೆ.
ಅಶ್ಲೀಲ ಚಾಟಿಂಗ್ ಆರೋಪ:
ಐಎಎಸ್ ಅಧಿಕಾರಿ ದೈಹಿಕವಾಗಿ ಬಳಿಸಿಕೊಂಡಿರುವುದಲ್ಲದೆ ಅಶ್ಲೀಲ ಚಾಟ್ ಮಾಡಿರುವ ಆರೋಪವೂ ಕೇಳಿಬಂದಿದ್ದು, ಚಾಟಿಂಗ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಯುವತಿ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾಳೆ. ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಚಿವೆ ಸ್ಮೃತಿ ಇರಾನಿ, ಸಿಎಂ ಬಸವರಾಜ ಬೊಮ್ಮಾಯಿ, ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ ನಿರಾಣಿಗೆ ಟ್ವಿಟ್ಟರ್ ಮೂಲಕ ದೂರು ನೀಡಿದ್ದಾಳೆ.
ಕರ್ನಾಟಕ ಮುಖ್ಯ ಕಾರ್ಯದರ್ಶಿಗೂ ಯುವತಿ ದೂರು ನೀಡಿದ್ದು, ದೂರು ನೀಡಿ ಒಂದು ವಾರ ಕಳೆದರೂ ಕ್ರಮ ಕೈಗೊಂಡಿಲ್ಲ. ಆದ್ರೆ ಸ್ನೇಹಲ್ ಲೊಖಂಡೆ ಆರೋಪವನ್ನು ತಳ್ಳಿಹಾಕಿದ್ದಾರೆ. ಯುವತಿ ಪರಿಚಯವಿದೆ ಅಷ್ಟೇ. ಆದ್ರೆ ಆರೋಪಗಳು ಸುಳ್ಳು, ಯುವತಿ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಕಲಬುರಗಿ ಮೇಯರ್, ಉಪಮೇಯರ್ ಬಗ್ಗೆ 'ನೋ ಕಾಮೆಂಟ್' ಎಂದ ಸಿಎಂ ಬೊಮ್ಮಾಯಿ