ಕಲಬುರಗಿ: ಬೇಸಿಗೆ ಆರಂಭವಾಗುತ್ತಿದಂತೆ ಕಲಬುರಗಿಯಲ್ಲಿ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ನಗರದ ಶರಣಬಸವೇಶ್ವರ ದೇವಸ್ಥಾನದ ಎದುರು ಮಡಿಕೆ ವ್ಯಾಪಾರ ಜೋರಾಗಿ ಸಾಗಿದೆ. ಆಧುನಿಕ ಶೈಲಿಯ ಮಡಿಕೆಗಳಿಗೆ ದೇಸಿ ಟಚ್ ಕೊಟ್ಟು ಮಾರಾಟಕ್ಕೆ ಇಡಲಾಗಿದೆ.
ಕಲಬುರಗಿ ಎಂದರೆ ಸಾಕು ತಕ್ಷಣ ನೆನಪಾಗುವುದು ಬಿಸಿಲು. ಇಲ್ಲಿ ವರ್ಷದ 10 ತಿಂಗಳು ನೆತ್ತಿ ಸುಡುವ ರಣ ಬಿಸಿಲಿರುತ್ತದೆ. ಬೇಸಿಗೆಯಲ್ಲಂತೂ ಇಲ್ಲಿ 40 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ದಾಖಲಾಗುತ್ತದೆ. ಹೀಗಾಗಿ ಕಲಬುರಗಿ ಜನ ಬೇಸಿಗೆ ತಾಪಕ್ಕೆ ಬಸವಳಿದು ಮಣ್ಣಿನ ಮಡಿಕೆಯ ಮೊರೆ ಹೋಗಿದ್ದಾರೆ.
ಆಕರ್ಷಕ ಮಡಿಕೆಗಳ ಮಾರಾಟ: ನಗರದ ಸುಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನದ ಎದುರು ಆಕರ್ಷಕ ಮಡಿಕೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಕಲಬುರಗಿ ನಗರ ಸೇರಿದಂತೆ ಸುತ್ತಿಲಿನ ಹಳ್ಳಿ ಜನರು ಇಲ್ಲಿಗೆ ಆಗಮಿಸಿ ಮಡಿಕೆ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ.
ಮನವಿ: ಈ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಮಡಿಕೆ ವ್ಯಾಪಾರ ಕುಂಬಾರರ ಕೈ ಹಿಡಿದಿದೆ. ಆದರೆ, ಮಡಿಕೆ ತಯಾರಿಸಲು ಕುಂಬಾರರಿಗೆ ಮಣ್ಣಿನ ಕೊರತೆಯಿದೆ. ಬೇರೆ ಕಡೆಯಿಂದ ಮಣ್ಣಿನ ಮಡಿಕೆ ಹಾಗೂ ಮಣ್ಣಿನಿಂದ ತಯಾರಾದ ಅಡಿಗೆ ಪಾತ್ರೆಗಳನ್ನು ತಂದು ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕೋವಿಡ್ ಹಿನ್ನೆಲೆ ಉಂಟಾದ ಪರಿಣಾಮದಿಂದ ನಾವು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕಿದೆ ಎಂದು ಕುಂಬಾರರು, ಮಡಿಕೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಹೆಚ್ಚಿನ ವ್ಯಾಪಾರ: ಇನ್ನು ಗುಜರಾತ್ ಹಾಗೂ ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಂದ ಆಕರ್ಷಕ ಮಣ್ಣಿನ ಮಡಿಕೆಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ವಾಟರ್ ಬಾಟಲ್, ಮಣ್ಣಿನಿಂದ ತಯಾರಿಸಿದ ಅಡುಗೆ ಪಾತ್ರೆಗಳನ್ನು ಸಹ ಮಾರಾಟಕ್ಕೆ ಇಟ್ಟಿದ್ದಾರೆ. ಗಾತ್ರದ ಆಧಾರದ ಮೇಲೆ 120 ರಿಂದ 450 ರವರೆಗೆ ಮಣ್ಣಿನ ಮಡಿಕೆಗಳಿಗೆ ದರ ನಿಗದಿ ಮಾಡಲಾಗಿದೆ. ಸದ್ಯ ದಿನಕ್ಕೆ ಹತ್ತರಿಂದ ಇಪ್ಪತ್ತು ಮಡಿಕೆಗಳು ಮಾರಾಟವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ವ್ಯಾಪಾರವಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಕುಂಬಾರರು.
ಆರೋಗ್ಯಕ್ಕೆ ಸೂಕ್ತ: ಫ್ರಿಡ್ಜ್, ಆಧುನಿಕ ಯಂತ್ರೋಪಕರಣಗಳಿಗೆ ಮೊರೆ ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುವ ಬದುಲು ಕಡಿಮೆ ಖರ್ಚಿನಲ್ಲಿ ಪರಿಸರ ಪ್ರಿಯ ಮಡಿಕೆಯಲ್ಲಿ ನೀರು ಶೇಖರಣೆ ಮಾಡಿ ಕುಡಿಯುವುದು ಹಾಗೂ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಬೇಯಿಸಿಕೊಂಡು ಸೇವಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂಬುದು ಗ್ರಾಹಕರೊಬ್ಬರ ಅಭಿಪ್ರಾಯ.
ಇದನ್ನೂ ಓದಿ: ಮಾದಪ್ಪನ ಬೆಟ್ಟದಲ್ಲಿ ಭಕ್ತ ಸಾಗರ, ಎರಡು ದಿನಗಳಲ್ಲಿ 20 ಲಕ್ಷ ರೂ. ಆದಾಯ!
ಒಟ್ಟಿನಲ್ಲಿ ಕೊರೊನಾ ನಂತರದ ದಿನಗಳಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ಬಿಸಿಲೂರು ಕಲಬುರಗಿಯಲ್ಲಿ ಮಡಿಕೆ ವ್ಯಾಪಾರ ಗರಿಗೆದರಿದ್ದು, ಕುಂಬಾರರ ಮೊಗದಲ್ಲಿ ಮಂದಹಾಸ ಮೂಡಿದೆ.