ಕಲಬುರಗಿ: ಮೇಕೆದಾಟು ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಜನರಿಗೆ ಮೂರು ನಾಮ ಹಾಕ್ತಿವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡೂ ರಾಜ್ಯಗಳು ಒಮ್ಮತಕ್ಕೆ ಬಂದ್ರೆ ನಾವು ಎಂಟ್ರಿ ಆಗ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿಕೆ ಕೊಡುತ್ತೆ. ನೀರಾವರಿ ತಜ್ಞ ಅಂತ ಹೇಳೋ ಸಿಎಂ ಬಜೆಟ್‌ನಲ್ಲಿ ಏನು ಕಾಳಜಿ ತೋರಿದ್ದಾರೆ ಎಂದು ಪ್ರಶ್ನಿಸಿದ ಅವರು, ನಮ್ಮ ಪಕ್ಷ ನೀರಾವರಿ ವಿಷಯದಲ್ಲಿ ಜನ ಪರವಾಗಿದೆ ಎಂದರು.
ನಾನು ಯಾವತ್ತೂ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ. ಸಾಫ್ಟ್ ಇದ್ದಿದ್ರೆ ನಾನು ಬಿಜೆಪಿ ವಿರುದ್ಧ ಮಾತನಾಡ್ತಿರಲಿಲ್ಲ. ಫ್ರಂಟ್, ಬ್ಯಾಕ್, ರೈಟ್, ಲೆಫ್ಟ್ ಅಂತ ಮಾತನಾಡಲ್ಲ. ಏನಿದ್ರೂ ನಾವು ನೇರವಾಗೇ ಹೇಳ್ತೀವಿ. ಎರಡೂ ಪಕ್ಷಗಳು ನಮ್ಮನ್ನು ಬೇಕಾದಾಗ ರೈಟು ಲೆಫ್ಟು ಅಂತ ಬಳಸಿಕೊಂಡಿವೆ. ಅವಧಿಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ ಬರುವ ಸಾಧ್ಯತೆ ಇದೆ. ಒಂದು ವೇಳೆ ಚುನಾವಣೆ ಬಂದ್ರೆ ಜೆಡಿಎಸ್ ಚುನಾವಣೆ ಎದುರಿಸಲು ಸಿದ್ಧವಿದೆ ಎಂದರು.
ಸಿಎಂ ದ್ರೋಹ ಮಾಡಿದ್ದಾರೆ: ರಾಜ್ಯದ ಜನರಿಗೆ ಸಿಎಂ ದ್ರೋಹ ಮಾಡಿದ್ದಾರೆ. ನಮ್ಮ ಪಕ್ಷದ ಸಂಕಲ್ಪ ಇರುವುದು ರಾಜ್ಯದಲ್ಲಿನ ಸಮಗ್ರ ನೀರಾವರಿ ಯೋಜನೆಗಳ ಬಗ್ಗೆ. ಆದ್ರೆ ರಾಷ್ಟ್ರೀಯ ಪಕ್ಷಗಳು ನೀರಾವರಿಯನ್ನು ನಿರ್ಲಕ್ಷ್ಯ ಮಾಡಿವೆ. ನೀರಾವರಿಯಲ್ಲಿ ಅನುಭವ ಇರುವ ಬೊಮ್ಮಾಯಿಯವರು ಬಜೆಟ್‌ನಲ್ಲಿ ಜನರಿಗೆ ದೊಡ್ಡ ದ್ರೋಹ ಮಾಡಿದ್ದಾರೆ. ಇನ್ನೂ ಕಾಂಗ್ರೆಸ್ನವರು ಪಾದಯಾತ್ರೆ ಮಾಡ್ತಾರೆ. ಎರಡೂ ಪಕ್ಷಕ್ಕೆ ಮೇಕೆದಾಟು ಯೋಜನೆ ಪ್ರಾರಂಭ ಮಾಡೋ ಯೋಗ್ಯತೆ ಇಲ್ಲ ಎಂದು ದೂರಿದರು.
ನಮ್ಮ ದೇಶದಲ್ಲಿ ಅವಕಾಶ ವಂಚಿತ ಮಕ್ಕಳು ಉಕ್ರೇನ್‌ಗೆ ಹೋಗುತ್ತಿದ್ದಾರೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುತ್ತಿಲ್ಲ. ನಮ್ಮಲ್ಲೇ ಉನ್ನತ ಶಿಕ್ಷಣ ಕೈಗೆಟುಕುವ ದರದಲ್ಲಿ ಸಿಕ್ಕಿದಿದ್ರೆ ಉಕ್ರೇನ್‌ನಲ್ಲಿ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ. ನೀಟ್ ವ್ಯವಸ್ಥೆಯಿಂದ ಅನೇಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯಾಗ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉಕ್ರೇನ್‌ನಲ್ಲಿ ಸಿಲುಕಿರುವ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಿ ಬರಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಹೊನ್ನಾವರದಲ್ಲಿ ನಿರ್ಮಾಣವಾಗುತ್ತಿದೆ 'ರಾಣಿ ಚೆನ್ನಭೈರಾದೇವಿ ಥೀಮ್ ಪಾರ್ಕ್'