ಕಲಬುರಗಿ: ನಿರಂತರ ಭೂಕಂಪನಕ್ಕೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮ ನಲುಗಿದೆ. ಭೂ ಕಂಪನಕ್ಕೆ ಹೆದರಿ ಈಗಾಗಲೇ ಗ್ರಾಮದ ಭಾಗಶಃ ಜನ ಊರು ತೊರೆದಿದ್ದಾರೆ. ಭೂ ಕಂಪನದಿಂದ ಬರೋಬ್ಬರಿ 523 ಮನೆಗಳು ಜಖಂ ಆಗಿದ್ದು, ವಾಸಕ್ಕೆ ಸೂಕ್ತವಾಗಿಲ್ಲ. ಹೀಗಾಗಿ ತಕ್ಷಣ ತಾತ್ಕಾಲಿಕ ಟಿನ್ ಶೆಡ್ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅ.8ರಿಂದ ಗಡಿಕೇಶ್ವರ ಗ್ರಾಮದಲ್ಲಿ ನಿರಂತರವಾಗಿ ಆಗಾಗ ಭೂಮಿ ಕಂಪಿಸುತ್ತಿದ್ದು, ಜನ ಆತಂಕದಿಂದಲೇ ಕಾಲ ಕಳೆಯುತ್ತಿದ್ದಾರೆ. ಪ್ರಾಣ ಭೀತಿಯಿಂದ ಗ್ರಾಮದ ಭಾಗಶಃ ಕುಟುಂಬಸ್ಥರು ಮನೆ - ಊರು ತೊರೆದು ದೂರದ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.
ಮನೆಗಳ ಪರಿಸ್ಥಿತಿ ಬಗ್ಗೆ ಜಿಲ್ಲಾಡಳಿತ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳ ಮೂಲಕ ಸರ್ವೆ ಮಾಡಿಸಿದೆ. ಕಚ್ಚಾ ಮತ್ತು ಪಕ್ಕಾ ಮನೆಗಳೆಂದು ಅಧಿಕಾರಿಗಳ ತಂಡ ಮಾಹಿತಿ ಕಲೆಹಾಕಿದೆ. ಮನೆಗಳ ಸರ್ವೆ ಪ್ರಕಾರ ಗಡಿಕೇಶ್ವರ ಗ್ರಾಮದಲ್ಲಿ 1,003 ಮನೆಗಳಿದ್ದು, ಅದರಲ್ಲಿ 480 ಪಕ್ಕಾ ಮನೆಳನ್ನ ಅಧಿಕಾರಿಗಳ ತಂಡ ಗುರುತು ಮಾಡಿದೆ. ಇನ್ನುಳಿದ 523 ಮನೆಗಳನ್ನು ಕಚ್ಚಾ ಮನೆಗಳೆಂದು ಗುರುತಿಸಿದ್ದಾರೆ.
ವಿಜ್ಞಾನಿಗಳ ತಂಡದಿಂದ ಪತ್ತೆ ಕಾರ್ಯ
ಭೂ ಕಂಪನ ಹಿನ್ನೆಲೆ ಜಿಲ್ಲಾಡಳಿತ ಗಡಿಕೇಶ್ವರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಕಾಳಜಿ ಕೇಂದ್ರದಲ್ಲಿ ತೆರೆದಿದೆ. ಜತೆಗೆ ಪುರುಷರಿಗಾಗಿ, ಮಹಿಳೆಯರಿಗಾಗಿ ಪ್ರತ್ಯೇಕ ಸಾಮೂಹಿಕ ಶೆಡ್ ನಿರ್ಮಾಣ ಮಾಡಿದೆ. ಅಲ್ಲದೇ ಭೂಮಿ ಕಂಪಿಸುತ್ತಿರುವ ಹಿನ್ನೆಲೆ ರಾಜ್ಯ ನೈಸರ್ಗಿಕ ವಿಪತ್ತು ನಿಗಾ, ಕೇಂದ್ರದ ವಿಜ್ಞಾನಿಗಳ ತಂಡ ಹಾಗೂ ಹೈದರಾಬಾದ್ನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ಭೇಟಿ ನೀಡಿ ಕಂಪನದ ತೀವ್ರತೆ, ಭೂ ಗರ್ಭದಲ್ಲಿ ಏನಾಗುತ್ತಿದೆ ಎಂಬ ಕುರಿತು ಪತ್ತೆ ಕಾರ್ಯ ನಡೆಸುತ್ತಿದೆ.
ಸಿಸ್ಮೋಮೀಟರ್ ಅಳವಡಿಸಿ ಕ್ಷಣ ಕ್ಷಣದ ಮಾಹಿತಿ
ಗ್ರಾಮ ಪಂಚಾಯಿತಿಯಲ್ಲಿ ತಾತ್ಕಾಲಿಕವಾಗಿ ಸಿಸ್ಮೋಮೀಟರ್ ಅಳವಡಿಸಿದ್ದು, ಭೂ ಕಂಪನದ ಕುರಿತು ಕ್ಷಣ ಕ್ಷಣದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇತ್ತ ಕಂದಾಯ ಸಚಿವ ಆರ್.ಅಶೋಕ್ ಕೂಡ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೇ ಜಖಂಗೊಂಡ ಮನೆಗಳ ವೀಕ್ಷಣೆ ನಡೆಸಿ, ತಾತ್ಕಾಲಿಕ ಟಿನ್ ಶೆಡ್ ನಿರ್ಮಿಸಿಕೊಡುವ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಆದರೆ ಗ್ರಾಮದಲ್ಲಿ 523 ಕಚ್ಚಾ ಮನೆಗಳು ವಾಸಕ್ಕೆ ಯೋಗ್ಯವಲ್ಲ ಅನ್ನೋ ಮಾಹಿತಿ ಹೊರಬಿದ್ದಿದ್ದು, ಜನರಿಗೆ ಮತ್ತಷ್ಟು ಆತಂಕ ಶುರುವಾಗಿದೆ. ಹೀಗಾಗಿ ವಿನಾ ಕಾರಣ ವಿಳಂಬ ಮಾಡದೇ ಸರ್ಕಾರ ತಕ್ಷಣ ಮನೆಗೊಂದು ಟಿನ್ ಶೆಡ್ ನಿರ್ಮಿಸಿ ಕೊಡಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಸಿದ್ದರಾಮಯ್ಯಗೆ ಭೂಕಂಪನದ ಅನುಭವ; ಗ್ರಾಮದಿಂದಲೇ ಕಂದಾಯ ಸಚಿವರಿಗೆ ಮಾಜಿ ಸಿಎಂ ಕರೆ