ಸೇಡಂ (ಕಲಬುರಗಿ): ಸೇಡಂ ಪಟ್ಟಣದ ಬಸ್ ನಿಲ್ದಾಣದ ಬಳಿಯ ಹಣ್ಣಿನ ಅಂಗಡಿಗಳಿಗೆ ಇಂದು ನಸುಕಿನ ಜಾವ ಬೆಂಕಿ ಬಿದ್ದಿದ್ದು, ಸಾವಿರಾರು ರೂಪಾಯಿ ಮೌಲ್ಯದ ಹಣ್ಣುಗಳು ಸುಟ್ಟು ಕರಕಲಾಗಿವೆ.
ಈ ಘಟನೆ ಖಂಡಿಸಿ ವ್ಯಾಪಾರಿಗಳು ರಸ್ತೆಗೆ ಅಡ್ಡಲಾಗಿ ಬಂಡಿಗಳನ್ನು ನಿಲ್ಲಿಸಿ ಕೆಲಹೊತ್ತು ಪ್ರತಿಭಟನೆ ನಡೆಸಿದರು. ಕಳೆದ ಕೆಲ ವರ್ಷಗಳಿಂದ ಇದೇ ರೀತಿಯ ಘಟನೆಗಳು ನಡೆಯುತ್ತಿದ್ದು, ಇಂದು ಮತ್ತೆ ನಮ್ಮ ಅಂಗಡಿಗಳಿಗೆ ಬೆಂಕಿ ಹಾಕಲಾಗಿದೆ. ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ಆಕಸ್ಮಿಕವೋ ಎಂಬುದೇ ಅರ್ಥವಾಗುತ್ತಿಲ್ಲ. ಈ ಕುರಿತು ಉಪ ತಹಶೀಲ್ದಾರ್ ನಾಗನಾಥ ತರಗೆ ಅವರಿಗೆ ಮನವಿ ಸಲ್ಲಿಸಲಾಗಿದೆ. ಕೂಡಲೇ ಪೊಲೀಸ್ ಇಲಾಖೆ ಹೆಚ್ಚಿನ ತನಿಖೆ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ನಂತರ ಸ್ಥಳಕ್ಕಾಗಮಿಸಿದ ಎಎಸ್‌ಐ ಪೃಥ್ವಿರಾಜ ಅವರು, ವ್ಯಾಪಾರಿಗಳ ಮನವೊಲಿಸಿ ಘಟನೆಯ ಮಾಹಿತಿ ಕಲೆ ಹಾಕುವುದಾಗಿ ಭರವಸೆ ನೀಡಿದ್ದಾರೆ.