ಕಲಬುರಗಿ: ಜಿಲ್ಲೆಯ ಪ್ರಮುಖ ಬೆಳೆ ತೊಗರಿಗೆ ಸೂಕ್ತ ಬೆಂಬಲ ಬೆಲೆ ನೀಡದೆ ಕೇಂದ್ರ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಸಂಸದ ಉಮೇಶ್ ಜಾಧವ್ ಅವರ ನಿವಾಸದೆದುರು ರೈತರು ಧರಣಿ ನಡೆಸಿದರು.
ರೈತ-ಕಾರ್ಮಿಕ-ದಲಿತ-ಕೃಷಿ ಕೂಲಿಕಾರರ ಐಕ್ಯ ಹೋರಾಟ ಸಮಿತಿಯ ನೇತೃತ್ವ ಹಾಗು ಮಾಜಿ ಶಾಸಕ ಬಿ. ಆರ್. ಪಾಟೀಲ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಮುಂದಾಳತ್ವದಲ್ಲಿ ರೈತರು ಧರಣಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.
ಇತ್ತೀಚೆಗೆ ಕೇಂದ್ರ ಸರ್ಕಾರ ಘೋಷಿಸಿರುವ ತೊಗರಿ ಬೆಂಬಲ ಬೆಲೆ ಇತರೆ ಬೆಳೆಗಳ ಬೆಂಬಲ ಬೆಲೆಗೆ ಹೋಲಿಸಿದರೆ ಅತ್ಯಂತ ಕಡಿಮೆ ಹಾಗೂ ಅವೈಜ್ಞಾನಿಕವಾಗಿದೆ. ಕೇಂದ್ರ ಸರ್ಕಾರ ಹೆಸರು, ಉದ್ದು, ಸೋಯಾಬಿನ್ ಸೇರಿದಂತೆ ಇತರೆ ಬೆಳೆಗಳಿಗೆ ಹೆಚ್ಚು ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಜೊತೆಗೆ ಭೌಗೋಳಿಕ ಮಾನ್ಯತೆಯನ್ನೂ ಪಡೆದಿರುವ ತೊಗರಿಗೆ ಸರಿಯಾದ ಬೆಂಬಲ ಬೆಲೆ ನಿಗದಿಪಡಿಸಿಲ್ಲ. ಇದರಲ್ಲೂ ತಾರತಮ್ಯ ನೀತಿ ಅನುಸರಿಸಲಾಗಿದೆ. ಪರಿಸ್ಥಿತಿ ಹೀಗಿದ್ದರೂ ಕಲಬುರಗಿ ಕ್ಷೇತ್ರ ಪ್ರತಿನಿಧಿಸುವ ಲೋಕಸಭಾ ಸದಸ್ಯ ಉಮೇಶ ಜಾಧವ್ ಈ ಭಾಗದ ರೈತರ ಪರವಾಗಿ ಧ್ವನಿಯೆತ್ತುವ ಬದಲು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಗಾಗಿ, ಕೂಡಲೇ ಕೇಂದ್ರ ಸರ್ಕಾರ ತೊಗರಿಗೆ ನಿಗದಿಪಡಿಸಲಾದ ಬೆಂಬಲ ಬೆಲೆಯನ್ನು ಪುನರ್ ಪರಿಶೀಲಿಸಿ 10 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.