ಕಲಬುರಗಿ: ವೃತ್ತಿಯಲ್ಲಿ ವೈದ್ಯರೂ ಆಗಿರುವ ಗುಲ್ಬರ್ಗಾ ಕ್ಷೇತ್ರದ ನೂತನ ಸಂಸದ ಡಾ. ಉಮೇಶ್ ಜಾಧವ್ ನಿನ್ನೆ ರಾತ್ರಿ ಸೇಡಂ ರಸ್ತೆಯಲ್ಲಿರುವ ಇಎಸ್ಐ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆರಿಗೆ ವಾರ್ಡ್, ಇಎನ್‌ಟಿ, ಶಸ್ತ್ರ ಚಿಕಿತ್ಸೆ ವಿಭಾಗ ಸೇರಿ ವಿವಿಧ ವಿಭಾಗಗಳಲ್ಲಿನ ಯಂತ್ರೋಪಕರಣಗಳನ್ನು ಪರಿಶೀಲಿಸಿದ ಸಂಸದರು, ವೈದ್ಯಾಧಿಕಾರಿಗಳಿಂದ ಒಳ ಮತ್ತು ಹೊರರೋಗಿಗಳ ಮಾಹಿತಿ ಪಡೆದರು. ರೋಗಿಗಳ ಆರೋಗ್ಯ ವಿಚಾರಿಸಿದ ಅವರು, ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯ, ಕುಂದು ಕೊರತೆ ಬಗ್ಗೆ ಆಲಿಸಿದರು. ಊಟ, ಕುಡಿಯುವ ನೀರಿನ ವ್ಯವಸ್ಥೆಯ ಮಾಹಿತಿ ಪಡೆದರು.
ಆಸ್ಪತ್ರೆಗೆ ಬರುವ ಇಎಸ್ಐ ಫಲಾನುಭವಿಗಳು, ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಬಾರದು. ರೋಗಿಗಳನ್ನು ಗೌರವದಿಂದ ಕಾಣುವುದರ ಜತೆಗೆ ತುರ್ತು ಚಿಕಿತ್ಸೆ ಮತ್ತು ಅಗತ್ಯ ಔಷಧ ನೀಡಬೇಕು ಎಂದು ವೈದ್ಯರಿಗೆ ಸೂಚಿಸಿದರು.
ಆಸ್ಪತ್ರೆ ವಾರ್ಡ್‌ಗಳಿಗೆ ತೆರಳಿ ವೈದ್ಯಕೀಯ ಸೇವೆಗಳನ್ನು ಪರಿಶೀಲಿಸಿದ ಅವರು, ನೀರು ಮತ್ತು ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಿ ಎಂದು ವೈದ್ಯಕೀಯ ಉಪ ಅಧೀಕ್ಷಕ ಡಾ. ದೀನಾನಾಥ ಅವರಿಗೆ ಸೂಚಿಸಿದರು. ದೆಹಲಿ ಮಾದರಿಯಲ್ಲಿ ಏಮ್ಸ್ (ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಆಸ್ಪತ್ರೆ ಸ್ಥಾಪನೆಯಾದರೆ ಈ ಆಸ್ಪತ್ರೆಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಾಗುವುದು. ರಾಜ್ಯದ ಎಲ್ಲ ಸಂಸದರ ವಿಶ್ವಾಸದೊಂದಿಗೆ ಕೇಂದ್ರದ ಮೇಲೆ ಒತ್ತಡ ಹಾಕಲಾಗುವುದು ಎಂದರು.
ಈ ವೇಳೆ ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ್, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ್, ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಲಿಂಗರಾಜ ಬಿರಾದಾರ ಇದ್ದರು.