ಕಲಬುರಗಿ: ಯತ್ನಾಳ್ ಒಬ್ಬ ಜೋಕರ್, ವಯಸ್ಸಿಗೆ ತಕ್ಕಂತೆ ವರ್ತಿಸಲ್ಲ. ಬಾಯಿಗೆ ಬಂದಂತೆ ಮಾತಾಡೋದು ಬಿಟ್ರೆ ಯತ್ನಾಳ್ಗೆ ಬೇರೆ ಗೊತ್ತಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಚಿಂಚೋಳಿಯಲ್ಲಿ ಪ್ರಚಾರ ಸಭೆ ಬಳಿಕ ರಟಕಲ್ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಗುಂಡೂರಾವ್, ಬಸನಗೌಡ ಪಾಟೀಲ ಯತ್ನಾಳ್ರ ಹೇಳಿಕೆಯನ್ನು ಖಂಡಿಸಿದರು.
ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ನಲ್ಲಿಯೇ ಷಡ್ಯಂತ್ರ ನಡೆದಿದೆ. ಅದಕ್ಕಾಗಿಯೇ ಸಮ್ಮಿಶ್ರ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ನೀಡಿದ್ದರು. ಇದೀಗ ಯತ್ನಾಳ್ ಜೋಕರ್ ಎನ್ನುವ ಮೂಲಕ ದಿನೇಶ್ ಗುಂಡೂರಾವ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಪಕ್ಷದಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ಯತ್ನಾಳ್ ಗಮನಹರಿಸಲಿ. ಅದನ್ನು ಬಿಟ್ಟು ಬೇರೆ ಪಕ್ಷದ ಬಗ್ಗೆ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಒಮ್ಮೆ ಸಂವಿಧಾನ ಬದಲಾಯಿಸೋದಾಗಿ ಹೇಳ್ತಾರೆ, ಮತ್ತೊಮ್ಮೆ ಎಂ.ಬಿ.ಪಾಟೀಲರನ್ನು ಉಪ ಮುಖ್ಯಮಂತ್ರಿ ಮಾಡೋದಾಗಿ ಹೇಳ್ತಾರೆ. ಸದ್ಯಕ್ಕಂತು ಉಪ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ ಎಂದು ದಿನೇಶ್ ಗುಂಡೂರಾವ್ ಹರಿಹಾಯ್ದರು.