ಕಲಬುರಗಿ: ನಗರದ ಕರುಣೇಶ್ವರ ಕಾಲೋನಿಯ ರೇನ್ಬೋ ಅಪಾರ್ಟ್ಮೆಂಟ್ ನಿವಾಸಿಯಾದ ಸವಿತಾ ಜವ್ಹಾರ ಎಂಬುವವರು ರೇನ್ಬೋ ಸ್ಕೂಟಿ ಟ್ರೇನಿಂಗ್ ಸ್ಕೂಲ್ ಹೆಸರಿನಲ್ಲಿ ಮಹಿಳೆಯರಿಗೆ ಬೈಕ್ ಓಡಿಸುವುದನ್ನು ಕಲಿಸುವುದಕ್ಕೆ ಮುಂದಾಗಿದ್ದಾರೆ. ಈ ಮೂಲಕ ಮಹಿಳೆಯರು ಪುರುಷರ ಮೇಲೆ ಅವಲಂಬಿತರಾಗದಿರಲು ತರಬೇತಿ ನೀಡುತ್ತಿದ್ದಾರೆ.
ಸಾಮಾನ್ಯವಾಗಿ ಬೈಕ್ ಚಾಲನಾ ತರಬೇತಿ ನೀಡುವವರು ಹಿಂದೆ ಕುಳಿತು ತರಬೇತಿ ನೀಡುತ್ತಾರೆ. ಆದರೆ, ಇವರು ಬೈಕ್ ಸವಾರರ ಹಿಂದೆ ಕುಳಿತುಕೊಳ್ಳದೇ ಕೆಲವೊಂದು ಸುಲಭವಾದ ಟೆಕ್ನಿಕ್ಗಳನ್ನು ತಿಳಿಸುವ ಮೂಲಕ ಬೈಕ್ ಚಾಲನೆ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತಾರೆ.
ಕೇವಲ 10 ದಿನಗಳಲ್ಲಿ ಬೈಕ್ ಚಾಲನೆ ಮಾಡುವುದವನ್ನು ತರಬೇತಿ ನೀಡುವ ಇವರು ಈಗಾಗಲೇ 250 ಮಂದಿಗೆ ತರಬೇತಿ ನೀಡಿದ್ದಾರೆ. ಇವರ ಬಳಿ ತರಬೇತಿಗೆ ಯುವತಿಯವರು ಮಾತ್ರವಲ್ಲ, 55 ವರ್ಷದಿಂದ 60 ವರ್ಷ ವೃದ್ಧೆಯರೂ ಕೂಡಾ ಬಂದು ತರಬೇತಿ ಪಡೆದುಕೊಳ್ಳುತ್ತಾರೆ.
ತಮ್ಮದೇ ದ್ವಿಚಕ್ರದ ಮೂಲಕ ತರಬೇತಿ ನೀಡುವ ಸವಿತಾ ಅವರು, ತರಬೇತಿಗೆ 2,500 ರೂಪಾಯಿ ಶುಲ್ಕ ಪಡೆಯುತ್ತಾರೆ. ಕಲಿಕಾ ಸಂದರ್ಭದಲ್ಲಿ ತಗಲುವ ಪೆಟ್ರೋಲ್ ಖರ್ಚು ಹಾಗೂ ವಾಹನ ಡ್ಯಾಮೇಜ್ ಏನೇ ಆದ್ರೂ ತಾವೇ ಭರಿಸಿಕೊಳ್ತಾರೆ. ಒಟ್ಟಿನಲ್ಲಿ ವಾಹನ ಓಡಿಸೋದು ತುಂಬಾ ಕಷ್ಟ ಅಂತಾ ಹಿಂಜರಿಯುವ ಮಹಿಳೆಯರು, ವೃದ್ದೆಯರು ಕೂಡ ಈಗ ಸವಿತಾ ಅವರಿಂದ ದ್ವಿಚಕ್ರ ಓಡಿಸೋದನ್ನ ಕಲಿತು ಖುಷಿ ಪಡ್ತಿದ್ದಾರೆ.