ಕಲಬುರಗಿ: ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಮರಳಿದ 14 ಜನರನ್ನು ಪತ್ತೆ ಹಚ್ಚಲಾಗಿದೆ. ಅವರನ್ನು ಮುಂಜಾಗ್ರತಾ ಕ್ರಮವಾಗಿ ಗೃಹ ಬಂಧನದಲ್ಲಿರಿಸಿ ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ಹೇಳಿದರು.
ಜಿಲ್ಲೆಯಿಂದ 26 ಜನ ಭಾಗವಹಿಸಿದ್ದರು ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಇದರಲ್ಲಿ ಜಿಲ್ಲೆಗೆ ವಾಪಸಾದ 14 ಜನರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಆರು ಮಂದಿ ಕರ್ನಾಟಕ್ಕಕ್ಕೆ ಇನ್ನೂ ಹಿಂದಿರುಗಿಲ್ಲ. ಮೂವರು ರಾಜ್ಯದ ಇತರೆ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಶರತ್ ಬಿ. ವಿವರಿಸಿದರು.
ಕೆಎಸ್ಆರ್ಪಿ ತುಕಡಿ ನಿಯೋಜನೆ: ಜಿಲ್ಲೆಯಲ್ಲಿ ಲಾಕ್ಡೌನ್ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಅವರ ನಿರ್ದೇಶನದಂತೆ ಕೆಎಸ್ಆರ್ಪಿ ತುಕಡಿ ನಿಯೋಜಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಆಯುಕ್ತರನ್ನು ಕೋರಲಾಗುವುದು ಎಂದರು.
ಸಂಭ್ರಮದ ಸಮಯ ಇದಲ್ಲ: ಕಲಬುರಗಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ಸಂಭ್ರಮದ ರೀತಿಯಲ್ಲಿ ಸುದ್ದಿಗಳು ಬರುತ್ತಿವೆ. ಇದು ಸಂಭ್ರಮದ ಸಮಯವಲ್ಲ. ಜಾಗೃತಿ ವಹಿಸಬೇಕಿದೆ ಎಂದು ಸ್ಪಷ್ಟಪಡಿಸಿದ ಅವರು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮನೆಯಿಂದ ಹೊರ ಬಾರದಿರುವುದೇ ಕೊರೊನಾ ಸೋಂಕು ತಡೆಯುವ ಏಕೈಕ ಮಾರ್ಗ. ಅದನ್ನು ಜನತೆ ಪಾಲಿಸಲೇಬೇಕು ಎಂದರು.