ಕಲಬುರಗಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಅದು ದಲಿತ ವಿರೋಧಿ ಪಕ್ಷ. ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಕಲಬುರಗಿ ಲೋಕಸಭಾ ಬಿಜೆಪಿ ಅಭ್ಯರ್ಥಿ, ಡಾ. ಉಮೇಶ್ ಜಾಧವ್ ಬೆಂಬಲಿಸಿ ಬಿಜೆಪಿ ಎಡಗೈ (ಎಸ್ಸಿ) ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಂದಿನ ಪ್ರಧಾನಿ, ಜವಾಹರಲಾಲ್ ನೆಹರು ಅವರೇ ಅಂಬೇಡ್ಕರ್ ಅವರ ಸೋಲಿಗೆ ಕಾರಣ ಎಂದರು.
ಕಾಂಗ್ರೆಸ್ ಪಕ್ಷ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿರೋಧಿ ಪಕ್ಷವಾಗಿದ್ದು, ಎಲ್ಲರನ್ನೂ ತುಳಿದು ಕಾಂಗ್ರೆಸ್ ನಾಯಕರು ಬೆಳೆದು ನಿಂತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯವರು ಸಂವಿಧಾನ ವಿರೋಧಿ ಎಂದು ಕಾಂಗ್ರೆಸ್ನವರು ಆರೋಪಿಸುತ್ತಾರೆ. ನಾವು ಸಂವಿಧಾನ ರಕ್ಷಣೆಯ ಪರವಾಗಿದ್ದೇವೆ ಎಂದರು.
ಮಲ್ಲಿಕಾರ್ಜುನ್ ಖರ್ಗೆ ಹಲವು ಬಾರಿ ಗೆದ್ದು ಬಂದಿದ್ದರು. ಆದರೆ ಕಲಬುರಗಿ ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಹೀಗಾಗಿ ಇಲ್ಲಿನ ಜನತೆ ಕಾಂಗ್ರೆಸ್ ಆಡಳಿತದಿಂದ ಬೇಸತ್ತು ಹೋಗಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ಗೆ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.