ಕಲಬುರಗಿ: ಕೊರೊನಾ ವೈರಸ್ ಭೀತಿ ನಡುವೆಯೂ ಕಲಬುರಗಿಯ ಶರಣಬಸವೇಶ್ವರನ 198 ನೇ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಶರಣಬಸವೇಶ್ವರ ಉತ್ತರಾಧಿಕಾರಿ ಚಿರಂಜಿವಿ ದೊಡ್ಡಪ್ಪ ಅಪ್ಪ ಅವರು ಸಂಪ್ರದಾಯದಂತೆ ರಥೋತ್ಸವಕ್ಕೆ ಚಾಲನೆ ನೀಡಿದರು. ಉತ್ತರಾಧಿಕಾರಿ ದೊಡ್ಡಪ್ಪ ಅಪ್ಪ ಅವರು ಕೂಡ ಕೊರೊನಾ ವೈರಸ್ ಭೀತಿ ಹಿನ್ನೆಲೆ ಮಾಸ್ಕ್ ಧರಿಸಿದ್ದು ಕಂಡುಬಂತು. ಪ್ರತಿ ವರ್ಷ ರಥೋತ್ಸವು ಸಂಜೆ ಗೋಧೂಳಿ ಸಮಯದಲ್ಲಿ ನಡೆಯುತಿತ್ತು. ಆದ್ರೆ ನಗರದಲ್ಲಿ ಕೊರೊನಾ ವೈರಸ್ನಿಂದ ಓರ್ವ ವ್ಯಕ್ತಿ ಮೃತಪಟ್ಟ ಹಿನ್ನೆಲೆ ರಥೋತ್ಸವ ಮ. 3:45 ಕ್ಕೆ ಎರಡು ಗಂಟೆ ಮುಂಚಿತವಾಗಿಯೇ ನಡೆಯಿತು. ಈ ಹಿನ್ನೆಲೆ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು.
ಮಾಜಿ ವಿಧಾನಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಕೂಡ ಶರಣಬಸವೇಶ್ವರ ಜಾತ್ರೆಗೆ ಆಗಮಿಸಿದ್ದು, ಅವರು ಕೂಡ ಮಾಸ್ಕ್ ಧರಿಸಿ ಪೂಜೆ ಸಲ್ಲಿಸಿ, ರಥೋತ್ಸವದಲ್ಲಿ ಭಾಗಿಯಾದರು. ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾಸ್ಕ್ ಧರಿಸಿ ಕರ್ತವ್ಯ ನಿರ್ವಹಿಸಿದರು. ಕೆಲ ಭಕ್ತರು ಮಾಸ್ಕ್ ಧರಿಸಿ ಜಾತ್ರೆಯಲ್ಲಿ ಭಾಗಿಯಾಗುವುದರ ಜೊತೆಗೆ ದೇವರ ಕೃಪೆಗೆ ಪಾತ್ರರಾದರು.