ಕಲಬುರಗಿ: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ವಿದ್ಯಾಕೇಂದ್ರವೊಂದರಲ್ಲಿ ಶಾಲಾ ಮಕ್ಕಳಿಂದ ಬಾಬರಿ ಮಸೀದಿ ಧ್ವಂಸ ಅಣಕು ಪ್ರದರ್ಶನ ನಡೆಸಿರುವುದಕ್ಕೆ ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡುವುದರ ಮೂಲಕ ಆಡಳಿತ ಮಂಡಳಿಯ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಏನು ಅರಿಯದ ಪುಟ್ಟ ಮಕ್ಕಳಿಂದ ಬಾಬರಿ ಮಸೀದಿ ಧ್ವಂಸ ಪ್ರಸ್ತುತಪಡಿಸಿರುವುದು ದಿಗ್ಬ್ರಮೆ ಮೂಡಿಸಿದೆ. ಪುಟ್ಟ ಮಕ್ಕಳಲ್ಲಿ ಕೋಮುವಾದದ ಬೀಜ ಬಿತ್ತಲಾಗುತ್ತಿದೆ. ಭಾರತದ ಜನರು ಏಕತೆ, ಸಹಬಾಳ್ವೆ ಇಂದ ಬದುಕು ಸಾಗಿಸುತ್ತಿದ್ದಾರೆ. ಆದರೆ ಕೆಲವರು ಧಾರ್ಮಿಕ ಹಾಗೂ ರಾಜಕೀಯ ಹಿತಾಸಕ್ತಿಗಾಗಿ ದೇಶದ ಮುಂದಿನ ಪ್ರಜೆಗಳಾದ ಮಕ್ಕಳಲ್ಲಿ ಕೋಮುದ್ವೇಷದ ಕಿಡಿ ಹೊತ್ತಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿ ಪ್ರಿಯಾಂಕ್ ಖರ್ಗೆ, ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕೂಡಲೆ ಶಿಕ್ಷಣ ಸಚಿವರು ವಿದ್ಯಾಸಂಸ್ಥೆ ಹಾಗೂ ಘಟನೆಗೆ ಕಾರಣರಾದವರ ವಿರುದ್ದ ಕಾನೂನು ಕ್ರಮ ಜರುಗಿಸಿ, ಸರ್ಕಾರದ ವತಿಯಿಂದ ಸಂವಿಧಾನದ ಆದರ್ಶಗಳ ಕುರಿತು ಕಾರ್ಯಕ್ರಮ ಆಯೋಜಿಸಿ ಮಕ್ಕಳ ಕೋಮು ಸೌಹಾರ್ದತೆ ತಿಳುವಳಿಕೆ ಮೂಡಿಸುವಂತೆ ಆಗ್ರಹಿಸಿದ್ದಾರೆ.