ಕಲಬುರಗಿ: ಹೈದರಾಬಾದ್ ನಿಜಾಮನ ಕಾಲದಲ್ಲಿ ಸರ್ಕಾರಿ ಹೈಸ್ಕೂಲ್ ಮತ್ತು ಪಿಯು ಕಾಲೇಜಿಗೆಂದು ಮೀಸಲಿಟ್ಟ ಭೂಮಿ ಮೇಲೆ ಅತಿಕ್ರಮಣಕಾರರ ವಕ್ರದೃಷ್ಟಿ ಬಿದ್ದಿದೆ. ಗಮನಾರ್ಹ ವಿಷಯ ಅಂದ್ರೆ, ಈ ವಿಚಾರದಲ್ಲಿ ರಕ್ಷಣೆ ಮಾಡಬೇಕಾದ ಜನಪ್ರತಿನಿಧಿಗಳು ಹಾಗೂ ಪ್ರಭಾವಿಗಳು ಭಕ್ಷಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಕಾಲೇಜಿನ ಸುತ್ತಲೂ ಅಕ್ರಮ ಕಟ್ಟಡಗಳು ತಲೆಯೆತ್ತಿವೆ. ರಾಷ್ಟ್ರೀಯ ಹೆದ್ದಾರಿ 218 ಕ್ಕೆ ಹೊಂದಿಕೊಂಡಿರುವ ಈ ಭೂಮಿ ನೂರಾರು ಕೋಟಿ ರೂ. ಬೆಲೆಬಾಳುತ್ತದೆ. ಸರ್ಕಾರಿ ಪಿಯು ಕಾಲೇಜು ಮತ್ತು ಹೈಸ್ಕೂಲ್ಗೆ ಸೇರಿದ ಒಟ್ಟು 6 ಎಕರೆ ಜಾಗದಲ್ಲಿ ಅರ್ಧದಷ್ಟು ಭಾಗದಲ್ಲಿ ಈಗ ಅತಿಕ್ರಮಣ ನಡೆದಿದೆ. ಒಂದು ಕಡೆ ಖಾಸಗಿ ಶಿಕ್ಷಣ ಸಂಸ್ಥೆ, ಮತ್ತೊಂದೆಡೆ ಖಾಸಗಿ ಅಂಗಡಿ ಮಳಿಗೆಗಳು ಅತಿಕ್ರಮಿಸಿವೆ. ಈ ಗೋಲ್ಮಾಲ್ನಲ್ಲಿ ಮಾಜಿ ಶಾಸಕರು ಸೇರಿದಂತೆ ಕೆಲ ಪ್ರಭಾವಿಗಳ ಹೆಸರು ತಳಕು ಹಾಕಿಕೊಳ್ಳುತ್ತಿದೆ. ಪ್ರಭಾವಿಗಳ ಹಿಡಿತದಲ್ಲಿರುವ ಅತಿಕ್ರಮಣ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಹಿಂದೆ ಆಂದೋಲದ ಮೂಲಕ ಜೇವರ್ಗಿಗೆ ತಾಲೂಕು ಕೇಂದ್ರ ಸ್ಥಳಾಂತರವಾಗಿತ್ತು. ಈ ವೇಳೆ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಈ ಸ್ಥಳ ಹೈದರಾಬಾದ್ ನಿಜಾಮ ಕೊಡುಗೆಯಾಗಿ ನೀಡಿದ್ದಾನೆ. ಅಂದಿನಿಂದ ನೂರಾರು ವರ್ಷಗಳ ಕಾಲ ಸರ್ಕಾರಿ ಆಸ್ತಿಯಾಗಿಯೇ ಇದ್ದ ಈ ಭೂಮಿ, ರಾಷ್ಟ್ರೀಯ ಹೆದ್ದಾರಿಯಾದ ಕಾರಣ ಖಾಸಗಿ ವ್ಯಕ್ತಿಗಳ ವಕ್ರದೃಷ್ಟಿ ಬಿದ್ದಿದೆ. ಸರ್ವೆ ನಂಬರ್ 60 ರಲ್ಲಿ ಸರ್ಕಾರಿ ಕಾಲೇಜು ಇದೆ. ಎದುರಿಗೆ ಸರ್ವೆ ನಂಬರ್ 61 ಇದೆ. ಇವು ಸರ್ಕಾರಿ ಆಸ್ತಿ ಎಂದು ಪಹಣಿಯಲ್ಲಿದೆ. ಆದ್ರೆ 61ನ್ನೇ ಎರಡು ಭಾಗಗಳಾಗಿ ವಿಂಗಡಿಸಿ, ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ. 61-ಎ ಹಾಗೂ 61-ಬಿ ಎಂದು ನಕಲಿ ದಾಖಲೆ ಸೃಷ್ಟಿಸಿ, ನಕಲಿ ನಕ್ಷೆಯನ್ನೂ ರೂಪಿಸಲಾಗಿದೆ. ಬಡ, ನಿರ್ಗತಿಕ ಮಕ್ಕಳು ಅಭ್ಯಾಸ ಮಾಡಬೇಕಾದ ಸ್ಥಳ ಅತಿಕ್ರಮಣ ಮಾಡಲಾಗಿದೆ.
ಇಷ್ಟ ಬಂದ ರೀತಿಯಲ್ಲಿ ಕಟ್ಟಡ ನಿರ್ಮಾಣ, ಬೇಕಾದಂತೆ ತಂತಿ ಬೇಲಿ ಹಾಕಿಕೊಂಡಿದ್ದಾರೆ. ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಪ್ರಕರಣನ್ನು ಗಂಭೀರವಾಗಿ ಪರಿಗಣಿಸಿ ಅತಿಕ್ರಮಣ ತೆರವುಗೊಳಿಸುವಂತೆ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರು ಮನವಿ ಮಾಡಿದ್ದಾರೆ.
ಒಟ್ಟಾರೆ ಪ್ರಭಾವಿಗಳು ಸರ್ಕಾರಿ ಕಾಲೇಜಿನ ಅರ್ಧದಷ್ಟು ಭೂಮಿ ಕಬಳಿಕೆ ಮಾಡಿದ್ದು, ಉಳಿದ ಭೂಮಿಗೂ ಈಗ ಕುತ್ತು ಬಂದಿದೆ. ನುಂಗಣ್ಣರಿಂದ ಭೂಮಿ ರಕ್ಷಣೆ ಮಾಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಿದೆ.