ಕಲಬುರಗಿ: ಗ್ರಾಮ ವಾಸ್ತವ್ಯದ ಮೂಲಕ ಜನರಿಗೆ ಹತ್ತಿರವಾಗಿದ್ದ ಸಿಎಂ ಕುಮಾರಸ್ವಾಮಿ ಇದೀಗ ಮತ್ತೊಮ್ಮೆ ಗ್ರಾಮವಾಸ್ತವ್ಯಕ್ಕೆ ಮೂಹೂರ್ತ ಫಿಕ್ಸ್ ಮಾಡಿದ್ದು, ಮೇಲಾಗಿ ಕಲಬುರ್ಗಿ ಜಿಲ್ಲೆಯನ್ನು ಗ್ರಾಮ ವಾಸ್ತವ್ಯಕ್ಕೆ ಆಯ್ದುಕೊಂಡಿರುವುದು ಬಿಸಿಲೂರಿನ ಜನತೆಯ ಖುಷಿ ಇಮ್ಮಡಿಗೊಳಿಸಿದೆ.
ಜೂನ್ 22 ಅಫ್ಜಲಪೂರ ತಾಲೂಕಿನಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ಬಾರಿ ಅತ್ಯಂತ ಹಿಂದುಳಿದ ಗ್ರಾಮದಲ್ಲಿ ವಾಸ್ತವ್ಯ ಮಾಡಲು ಸಿಎಂ ನಿರ್ಧರಿಸಿದ್ದು, ಅಫ್ಜಲಪೂರ ತಾಲೂಕಿನ ಹೇರೂರ, ಗುಡೂರು, ಬೈರಾಮಡಗಿ ಗ್ರಾಮಗಳ ಪೈಕಿ ಒಂದನ್ನು ಸಿಎಂ ವಾಸ್ತವ್ಯಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ. ಸಿಎಂ ಗ್ರಾಮ ವಾಸ್ತವ್ಯದಿಂದ ಸ್ಥಳೀಯ ಸಮಸ್ಸೆಗಳಿಗೆ ಪರಿಹಾರ ಸಿಗಲಿದೆ. ಇದೆ ಕಾರಣಕ್ಕೆ ಅಫ್ಜಲಪೂರ ತಾಲೂಕಿನ ಪ್ರಗತಿಗೆ ಆದ್ಯತೆ ಸಿಗಲಿದೆ. ಸ್ಥಳೀಯ ಸಮಸ್ಯೆಗೆ ತಕ್ಷಣ ಪರಿಹಾರ ಸಿಗುವ ಮಹಾದಾಸೆಯನ್ನು ಅಫ್ಜಲಪೂರ ಶಾಸಕ ಎಮ್.ವೈ ಪಾಟೀಲ್ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ 2007ರಲ್ಲಿ ಅಫ್ಜಲಪೂರ ತಾಲೂಕಿನಲ್ಲಿ ಭೀಮಾ ಪ್ರವಾಹದಿಂದ ಜನ ಸಂತ್ರಸ್ತರಾದಾಗ ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಿ ಸ್ಥಳೀಯ ಸಮಸ್ಸೆಗಳಿಗೆ ಸ್ಪಂದಿಸಿದ್ದರು. ಭೀಮಾ ನದಿ ಪ್ರವಾಹದಿಂದ ಅನೇಕ ಜನ ಮನೆಗಳನ್ನು ಕಳೆದುಕೊಂಡಾಗ ಅವರಿಗೆ ಪುನರ್ವಸತಿ ಕಲ್ಪಿಸಲು ಸಿಎಂ ಗ್ರಾಮ ವಾಸ್ತವ್ಯ ತುಂಬ ಸಹಾಯಕವಾಗಿತ್ತು. ಅವಾಗ್ಲೂ ನಾನೇ ಶಾಸಕನಾಗಿದ್ದೆ, ಇದೀಗ ಮತ್ತೊಮ್ಮೆ ನನ್ನ ಅವಧಿಯಲ್ಲಿ ಸಿಎಂ ಅಫ್ಜಲಪೂರು ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಸಂತಸ ಮೂಡಿಸಿದೆ ಎಂದು ಶಾಸಕ ಪಾಟೀಲ್ ಹರ್ಷ ವ್ಯಕ್ತಪಡಿಸಿ ಸಿಎಂಗೆ ಅಭಿನಂದನೆ ಸಲ್ಲಿಸಿದ್ದಾರೆ.