ಕಲಬುರಗಿ : ಗ್ರಾಮ ಪಂಚಾಯತ್‌ನ ಎಲ್ಲಾ ಸದಸ್ಯರನ್ನು ಅವಿರೋಧ ಆಯ್ಕೆ ಮಾಡಿದ್ರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಒಂದು ಕೋಟಿ ರೂ. ವಿಶೇಷ ಅನುದಾನ ನೀಡುವುದಾಗಿ ಘೋಷಣೆ ಮಾಡಿದ ಹಿನ್ನೆಲೆ ಚಿತ್ತಾಪುರ ತಾಲೂಕಿನ ರಾವೂರ ಗ್ರಾಪಂ 32 ಸದಸ್ಯರು ಅವಿರೋಧ ಆಯ್ಕೆ ಮಾಡಲಾಗಿದೆ.
ರಾವೂರ ಗ್ರಾಪಂ ವ್ಯಾಪ್ತಿಯ ರಾವೂರನಿಂದ 25 ಹಾಗೂ ಗಾಂಧಿನಗರದಿಂದ 7 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಆರಂಭದಲ್ಲಿ ಒಟ್ಟು 56 ಜನ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು.
ಆದ್ರೆ, ಅವಿರೋಧ ಆಯ್ಕೆಯಾದ ಗ್ರಾಪಂಗಳಿಗೆ ಕೆಕೆಆರ್‌ಡಿಬಿಯಿಂದ ₹1ಕೋಟಿ ವಿಶೇಷ ಅನುದಾನ ನೀಡುವುದಾಗಿ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಘೋಷಿಸಿದ ಹಿನ್ನಲೆ ಗ್ರಾಮದ ಅಭಿವೃದ್ಧಿಗೆ ವಿಶೇಷ ಅನುದಾನ ಸಹಕಾರಿಯಾಗಲಿದೆ ಅಂತಾ ಗ್ರಾಮಸ್ಥರ ಸಮ್ಮುಖದಲ್ಲಿ ಅಭ್ಯರ್ಥಿಗಳ ಮನವೊಲಿಸಿ 24 ಜನ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಪಕ್ಷಬೇಧ ಮರೆತು 32 ಜನ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ರಾವೂರ ಗ್ರಾಮ ಪಂಚಾಯತ್ ಹೊಸ ಇತಿಹಾಸ ಸೃಷ್ಟಿಸಿದೆ.