ಕಲಬುರಗಿ: ಪ್ರಧಾನಿ ಮೋದಿ ಅವರು ಘೋಷಿಸಿದ ₹ 20 ಲಕ್ಷ ಕೋಟಿ ಪ್ಯಾಕೇಜ್ನಲ್ಲಿ ಸ್ಪಷ್ಟತೆ ಇಲ್ಲ. ಇದೊಂದು ಗಿಮಿಕ್ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ಮೋದಿ ಅವರ ಭಾಷಣದಲ್ಲಿ ಪ್ರಮುಖವಲ್ಲದ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಕೇವಲ ಎರಡು ನಿಮಿಷದಲ್ಲಿ ಸ್ಪಷ್ಟತೆ ಇಲ್ಲದ ಪ್ಯಾಕೇಜ್ ಘೋಷಿಸಿದರು. ಇದು ಬಹುಪಾಲು ಜನರಿಗೆ ನಿರಾಸೆ ಮೂಡಿಸಿದೆ ಎಂದು ಟೀಕಿಸಿದ್ದಾರೆ.
ಕೊರೊನಾ ಪ್ರೇರಿತ ಲಾಕ್ಡೌನ್ನಿಂದಾಗಿ ದೇಶವೇ ಸ್ತಬ್ಧವಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಟಕ್ಕೆ ಒಳಗಾಗಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ದೇಶದ ಬೆನ್ನೆಲುಬಾದ ರೈತರು ಕೂಡ ತೀವ್ರ ತೊಂದರೆ ಅನುಭವಿಸಿದ್ದಾರೆ. ಪ್ಯಾಕೇಜ್ನಲ್ಲಿ ಇವರನ್ನು ಕಡೆಗಣಿಸಲಾಗಿದೆ ಎಂದರು.
ಈ ಹಿಂದೆ ಘೋಷಿಸಲಾದ ಕೇಂದ್ರ ಸರ್ಕಾರದ ಪ್ರಾಯೋಜಿತ ನಿಧಿಯೂ ಸೇರಿದೆಯೇ, ಇಲ್ಲವೇ ಎಂಬುದರ ಕುರಿತು ಸ್ಪಷ್ಟತೆ ನೀಡಲಿಲ್ಲ. ಪ್ಯಾಕೇಜ್ ಬಗ್ಗೆ ಪ್ರಧಾನಿ ಅವರೇ ವಿವರ ಕೊಡಬಹುದಿತ್ತು. ಅದನ್ನು ಹಣಕಾಸು ಸಚಿವರಿಗೆ ವಹಿಸಿದ್ದಾರೆ ಎಂದರು.