ಹುಬ್ಬಳ್ಳಿ: ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮನನೊಂದು ಯುವತಿಯೊಬ್ಬಳು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವತಿಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸುವ ಮೂಲಕ ಉಪನಗರ ಠಾಣೆ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ವಿಕಾಸ ನಗರದ ಸಿದ್ಧಲಿಂಗೇಶ್ವರ ಕಾಲೋನಿಯ ಯುವತಿಯೊಬ್ಬಳು ಯುವಕನೊಬ್ಬನನ್ನು ಪ್ರೀತಿಸಿ ಮದುವೆಗೆ ಮುಂದಾಗಿದ್ದಳು. ಆದರೆ, ಮನೆಯವರು ಪ್ರೀತಿಗೆ ಒಪ್ಪದ ಕಾರಣ ಮನನೊಂದು ನಿದ್ದೆ ಮಾತ್ರೆ ಸೇವಿಸಿದ್ದಾಳೆ ಎಂದು ತಿಳಿದು ಬಂದಿದೆ.
ಮಾತ್ರೆ ತೆಗೆದುಕೊಂಡ ನಂತರ, ಕೂಡಲೇ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ದೌಡಾಯಿಸಿದ ಉಪನಗರ ಠಾಣೆಯ ಹೊಯ್ಸಳ - 6 ಪೊಲೀಸರು ಯುವತಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸದ್ಯ ಯುವತಿ ಸಂಪೂರ್ಣ ಗುಣಮುಖರಾಗಿದ್ದು, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಿದ ಮಹಿಳಾ ಪೊಲೀಸ್ ಸಿಬ್ಬಂದಿಗಳಾದ ಎಮ್. ಹೆಚ್. ಜಾಧವ, ಮಾರ್ಗೆರೇಟ್ ಹಾಗೂ ಹೊಯ್ಸಳ ವಾಹನ ಚಾಲಕ ಬಸವರಾಜ ಲಮಾಣಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ. ಪೊಲೀಸರ ಜನಸ್ನೇಹಿ ಕಾರ್ಯ ವೈಖರಿಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಜೋಡಿಗೆ ಜಾತಿ ಹೆಸರಲ್ಲಿ ಬೆದರಿಕೆ ಆರೋಪ; ಪೊಲೀಸರ ಮೊರೆ ಹೋದ ಲವ್ ಬರ್ಡ್ಸ್