ಧಾರವಾಡ: ಕುಸ್ತಿ ಹಬ್ಬದ ಅಂಗವಾಗಿ ಇಂದು ಧಾರವಾಡದಲ್ಲಿ ಕುಸ್ತಿ ಜನ ಜಾಗೃತಿ ಪಾದಯಾತ್ರೆ ಕಾರ್ಯಕ್ರಮ ನಡೆಸಲಾಯಿತು.
ಪಾದಯಾತ್ರೆಗೆ ಗ್ರಾಮೀಣ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು. ಧಾರವಾಡದ ಜಿಲ್ಲಾ ಆಸ್ಪತ್ರೆ ರಸ್ತೆಯಲ್ಲಿರುವ ಗರಡಿ ಮನೆಯಲ್ಲಿ ಕುಸ್ತಿ ಅಖಾಡಕ್ಕೆ ಪೂಜೆ ಸಲ್ಲಿಸಿ, ಜನಜಾಗೃತಿ ಪಾದಯಾತ್ರೆ ನಡೆಸಲಾಯಿತು. ಪಾದಯಾತ್ರೆ ಧಾರವಾಡದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕರ್ನಾಟಕ ಕಲಾ ಮಹಾವಿದ್ಯಾಲಯದ ಆವರಣಕ್ಕೆ ಬಂದು ಮುಕ್ತಾಯಗೊಂಡಿತು.
ನಂತರ ಅಮೃತ ದೇಸಾಯಿ ಮಾತನಾಡಿ, ಪ್ರತಿ ವರ್ಷ ಧಾರವಾಡದಲ್ಲಿ ಕುಸ್ತಿ ಹಬ್ಬ ಆಚರಣೆ ಮಾಡಲಾಗುತ್ತದೆ, ಕುಸ್ತಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಖಾಯಂ ಕುಸ್ತಿ ಅಖಾಡಗಳ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿ, ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕುಸ್ತಿ ದೇಶಿಯ ಶೈಲಿಯ ಪ್ರಮುಖ ಆಟ. ಕುಸ್ತಿಯನ್ನು ಧಾರವಾಡ ಜಿಲ್ಲೆ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಪ್ರೋತ್ಸಾಹಿಸಲು ಕರ್ನಾಟಕ ಕುಸ್ತಿ ಹಬ್ಬವನ್ನು ಆಯೋಜಿಸಲಾಗುತ್ತಿದೆ. ಕುಸ್ತಿ ಪೈಲ್ವಾನರಿಗೆ ಮಾಶಾಸನ ಹೆಚ್ಚಳ ಕುರಿತು ಕ್ರೀಡಾಮಂತ್ರಿ ಹಾಗೂ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದರು.
ಇನ್ನು ಪಾದಯಾತ್ರೆಯಲ್ಲಿ ಮಾಜಿ ಹಾಗೂ ಹಾಲಿ ಪೈಲ್ವಾನರು, ಯುವಕ ಸಂಘಗಳ ಸದಸ್ಯರು, ಕುಸ್ತಿ ಹಬ್ಬದ ಸಮಿತಿ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.