ಧಾರವಾಡ: ಹೆರಿಗೆ ಮಾಡುವ ವೇಳೆ ವೈದ್ಯರ ಯಡವಟ್ಟಿನಿಂದಾಗಿ ಮಹಿಳೆ ಮೂತ್ರನಾಳದ ಸಮಸ್ಯೆ ಎದುರಿಸುತ್ತಿದ್ದಾಳೆ ಎಂದು ಆರೋಪಿಸಿ ಆಸ್ಪತ್ರೆಯ ಎದುರು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಧಾರವಾಡದ ತಾವರಗೇರಿ ಹೆರಿಗೆ ಆಸ್ಪತ್ರೆಯಲ್ಲಿ ಒಂದು ತಿಂಗಳ ಹಿಂದೆ ಚೈತನ್ಯ ನಗರ ನಿವಾಸಿ ಅನಿತಾ ಪಾಟೀಲ್ ಹೆರಿಗೆಗೆಂದು ದಾಖಲಾಗಿದ್ದರು. ಸಾಮಾನ್ಯ ಹೆರಿಗೆಗೆ ತೊಂದರೆ ಇದೆ ಎಂದು ವೈದ್ಯರು ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ಹೆರಿಗೆ ನಂತರ ತಾಯಿ-ಮಗು ಇಬ್ಬರು ಆರೋಗ್ಯಯೂ ಇದ್ದರು. ಆದರೆ ಇದೀಗ ತಾಯಿಯ ಮೂತ್ರನಾಳದಲ್ಲಿ ತೊಂದರೆ ಉಂಟಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಹೆರಿಗೆ ಮಾಡಿದ ವೈದ್ಯರನ್ನು ಸಂಪರ್ಕಿಸಿದಾಗ ಮೂತ್ರನಾಳದ ತೊಂದರೆಯಿದೆ ಎಂದು ಮೂತ್ರನಾಳದ ವೈದ್ಯರನ್ನು ಸಂಪರ್ಕಿಸಲು ಹೇಳಿದ್ದಾರೆ. ಹೆರಿಗೆ ಮಾಡಿಸುವಾಗ ವೈದ್ಯರ ನಿರ್ಲಕ್ಷ್ಯದಿಂದಲೇ ಮೂತ್ರನಾಳದಲ್ಲಿ ತೊಂದರೆಯಾಗಿದೆ ಎಂದು ಮತ್ತೊಬ್ಬ ವೈದ್ಯರು ಹೇಳಿದ್ದಾರೆ.
ಸಿಜೇರಿಯನ್ ಮಾಡಿಸಲು 55 ಸಾವಿರ ಹಣ ಕೊಟ್ಟಿದ್ದೇವೆ. ಈಗ ತಾಯಿಗೆ ತೊಂದರೆ ಉಂಟಾಗಿದ್ದು, ಮುಂದಿನ ಚಿಕಿತ್ಸೆಗೆ ನಮ್ಮ ಬಳಿ ಹಣವಿಲ್ಲ ಎಂದು ಅಳಲು ತೋಡಿಕೊಂಡಿರುವ ಕುಟುಂಬಸ್ಥರು, ಅಚಾತುರ್ಯ ಎಸಗಿದ ತಾವರಗೇರಿ ಆಸ್ಪತ್ರೆಯ ವೈದ್ಯರೇ ಚಿಕಿತ್ಸೆ ವೆಚ್ಚ ಭರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ತಾವರಗೇರೆ ಆಸ್ಪತ್ರೆಯ ಹಿರಿಯ ವೈದ್ಯ ಸಂಜೀವ ಕುಲಕರ್ಣಿ ತಿಳಿಸಿದಂತೆ, ನಾವು ಹೆರಿಗೆ ಮಾಡಿಸಿದ್ದು ನಿಜ. ಆದರೆ ಮೂತ್ರನಾಳದಲ್ಲಿನ ತೊಂದರೆಗೆ ಅದು ಕಾರಣ ಅಲ್ಲ. ಇದರಲ್ಲಿ ನಮ್ಮದೇನು ತಪ್ಪಿಲ್ಲ. ಹೀಗಾಗಿ ಒಳ್ಳೆಯ ವೈದ್ಯರ ಬಳಿಗೆ ಅವರನ್ನು ಕಳಿಸಿಕೊಡಬಹುದು ಅಷ್ಟೆ. ಮುಂದಿನ ಖರ್ಚನ್ನು ನಾವು ಭರಿಸಲು ಸಾಧ್ಯವಿಲ್ಲ. ಮಾನವೀಯತೆ ದೃಷ್ಟಿಯಿಂದ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದಿದ್ದಾರೆ.