ಹುಬ್ಬಳ್ಳಿ: ಪುಲ್ವಾಮಾದಲ್ಲಿ ಉಗ್ರರ ಪೈಶಾಚಿಕ ಬಾಂಬ್ ದಾಳಿಗೆ ಭಾರತೀಯ ಯೋಧರು ಮೃತಪಟ್ಟಿರುವುದನ್ನು ಖಂಡಿಸಿ ದೇಶ ಪ್ರೇಮಿಯೊಬ್ಬ ದೇಶ ಪರ್ಯಟನೆ ಮಾಡಿ ಯೋಧರ ಸಮಾಧಿಯಿಂದ ಮಣ್ಣು ಪಡೆದು ಬಾವುಟ ನಿರ್ಮಾಣ ಕನಸು ಕಂಡಿದ್ದಾರೆ.
ಹೌದು, ಉಮೇಶ ಜಾಧವ್ ಎಂಬಾತನೇ ಈ ಕಾರ್ಯಕ್ಕೆ ಮುಂದಾಗಿದ್ದು, ಕಳೆದ ವರ್ಷ ದೇಶವನ್ನು ತಲ್ಲಣಗೊಳಿಸಿದ್ದ ಪುಲ್ವಾಮಾ ದಾಳಿಗೆ ರಾಜ್ಯದ 40 ಯೋಧರು ಹುತಾತ್ಮರಾಗಿದ್ದರು, ಈ ಹಿನ್ನೆಲೆಯಲ್ಲಿ ದೇಶ ಹಾಗೂ ಯೋಧರ ಮೇಲೆ ಅಪಾರವಾದ ಅಭಿಮಾನ ಹೊಂದಿರುವ ಉಮೇಶ್ ಪುಲ್ವಾಮಾ ದಾಳಿಯನ್ನು ಖಂಡಿಸಿ ರಾಜ್ಯದಾದ್ಯಂತ ಪರ್ಯಟನೆ ಮಾಡುತ್ತಿದ್ದಾರೆ.
ಉಮೇಶ್ ಮೂಲತಃ ಬೆಂಗಳೂರಿನವರು ಯೋಧರ ಮೇಲಿನ ಅಭಿಮಾನದಿಂದ ತಮ್ಮ ವೃತ್ತಿಯನ್ನು ಬಿಟ್ಟು ಹುತಾತ್ಮ ಯೋಧರ ಕುಟುಂಬಕ್ಕೆ ಭೇಟಿ ಮಾಡಿ ಅವರ ಕುಟುಂಬಕ್ಕೆ ಸಾಂತ್ವನದ ಜೊತೆಗೆ ಯೋಧರ ಸಮಾಧಿಯ ಮಣ್ಣು ಸಂಗ್ರಹ ಮಾಡುತ್ತಿದ್ದಾರೆ. ಇನ್ನೂ ಇವರು ಈ ಮಣ್ಣನ್ನು ಶ್ರೀ ನಗರದಲ್ಲಿ ಬಾವುಟವನ್ನು ತಯಾರು ಮಾಡುವ ಉದ್ದೇಶ ಹೊಂದಿದ್ದಾರೆ.
ಇಂದು ಹುಬ್ಬಳ್ಳಿಗೆ ಭೇಟಿ ನೀಡಿ ನಗರದ ಖಾದಿ ಉದ್ಯೋಗ ಗ್ರಾಮಕ್ಕ ತೆರಳಿ ರಾಷ್ಟ್ರೀಯ ಧ್ವಜ ತಯಾರಿಸುವುದನ್ನು ವೀಕ್ಷಣೆ ಮಾಡಿದ್ದು, ಇವರಿಗೆ ಹುಬ್ಬಳ್ಳಿ ಲೇಡಿಸ್ ಸರ್ಕಲ್ ಸೆಂಟ್ರಲ್ನ 71 ಸದಸ್ಯರು ಸನ್ಮಾನ ಮಾಡಿ ಗೌರವಿಸಿ ಮುಂದಿನ ಪ್ರಯಾಣ ಸುಖಕರವಾಗಲಿ ಎಂದು ಹಾರೈಸಿದರು.
ಒಟ್ಟಿನಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಸವಿನೆನಪಿಗಾಗಿ ತಮ್ಮ ಕೆಲಸವನ್ನು ಬಿಟ್ಟು ದೇಶ ಪರ್ಯಟನೆ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿರುವ ಉಮೇಶ್ ಕಾರ್ಯ ಶ್ಲಾಘನೀಯ.