ಹುಬ್ಬಳ್ಳಿ: ರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಾಣಿಜ್ಯನಗರಿ ಹುಬ್ಬಳ್ಳಿಯ ಏರ್ಪೋರ್ಟ್ನಲ್ಲಿ ಭದ್ರತಾ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಗುರು ಹಾಗೂ ಮಾಯಾ ಎನ್ನುವ ಹೆಸರಿನ ಎರಡು ಬೆಲ್ಜಿಯಂ ಶೆಫರ್ಡ್ ಶ್ವಾನಗಳು ಸೇರ್ಪಡೆಯಾಗಿವೆ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯು ಒಂದು ವರ್ಷದ ಬೆಲ್ಜಿಯಂ ಶೆಫರ್ಡ್ ನಾಯಿಗಳನ್ನು ತನ್ನ ಭದ್ರತಾ ತಂಡಕ್ಕೆ ಸೇರಿಸಿಕೊಂಡಿದೆ. ಇದರಿಂದಾಗಿ ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಬಲ ಹೆಚ್ಚಿದಂತಾಗಿದೆ.
ಬೆಂಗಳೂರಿನಲ್ಲಿ ಸಿಆರ್‌ಪಿಎಫ್ ಶ್ವಾನ ತಳಿ ಮತ್ತು ತರಬೇತಿ ಶಾಲೆಯಲ್ಲಿ ಏಳು ತಿಂಗಳು ಈ ಶ್ವಾನಗಳಿಗೆ ತರಬೇತಿ ನೀಡಲಾಗಿದೆ. ಈ ತಳಿಯ ಶ್ವಾನಗಳು ಸ್ಫೋಟಕಗಳು ಮತ್ತು ಮಾದಕವಸ್ತುಗಳನ್ನು ವೇಗವಾಗಿ ಪತ್ತೆಹಚ್ಚಲು ವಿಶೇಷವಾಗಿ ತರಬೇತಿ ಪಡೆದಿರುತ್ತವೆ. ಗುರು ಶ್ವಾನಕ್ಕೆ ಮಾದಕ ದ್ರವ್ಯಗಳನ್ನು ಪತ್ತೆ ಮಾಡಲು ತರಬೇತಿ, ಮಾಯಾಗೆ ಸ್ಫೋಟಕಗಳನ್ನು ಪತ್ತೆಹಚ್ಚಲು ತರಬೇತಿ ನೀಡಲಾಗಿದೆ. ವಿಮಾನಗಳಲ್ಲಿ ಸ್ಫೋಟಕಗಳು, ಮಾದಕ ದ್ರವ್ಯಗಳನ್ನು ಪತ್ತೆಹಚ್ಚಲು ಮತ್ತು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಾಮಗ್ರಿಗಳಲ್ಲಿ ಅಪಾಯಕಾರಿ ವಸ್ತುಗಳಿದ್ದರೆ ಗುರುತಿಸಲು ಶ್ವಾನಗಳನ್ನು ಬಳಸಲಾಗುತ್ತದೆ.

ಭದ್ರತಾ ತಂಡದ ಶ್ವಾನದಳಕ್ಕೆ ಹೊಸ ತಳಿಗಳ ಸೇರ್ಪಡೆ ಸಮಯದಲ್ಲಿ ಭದ್ರತಾ ಪಡೆಯ ಮೂರನೇ ಬೆಟಾಲಿಯನ್‌ನ ಕಮಾಂಡೆಂಟ್ ಟಿ. ಫೈಜುದ್ದೀನ್, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ, ಇನ್‌ಸ್ಪೆಕ್ಟರ್ ಮಹೇಶ ಹುದ್ದಾರ್, ಪಿಎಸ್‌ಐ ಹನುಮಂತ ಕರಿ, ಶ್ವಾನ ನಿರ್ವಹಣಾ ಅಧಿಕಾರಿಗಳಾದ ಮಹೇಶ ದೊಡ್ಡಮನಿ, ರಮೇಶ ಉಪ್ಪಾರ, ಫಕೀರಪ್ಪ ಹುಲ್ಲೂರು ಹಾಗೂ ಮಂಜುನಾಥ ಡಿ. ಪಾಲ್ಗೊಂಡಿದ್ದರು.
ಈ ಬಗ್ಗೆ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿದ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ, ಅತ್ಯಾಧುನಿಕ ತಂತ್ರಜ್ಞಾನದ ನಡುವೆಯೂ ಶ್ವಾನಗಳು ರಕ್ಷಣೆ ದೃಷ್ಟಿಯಿಂದ ಮಹತ್ವದ ಪಾತ್ರವಹಿಸಲಿವೆ. ಹೀಗಾಗಿ ವಿಮಾನ ನಿಲ್ದಾಣದ ಭದ್ರತೆಗೆ ಮತ್ತಷ್ಟು ಶಕ್ತಿ ತುಂಬಲಿವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಂಧ್ರಪ್ರದೇಶದ ವ್ಯಾಪಾರಿಯಿಂದ ಅಪರೂಪದ ಫೌಂಟೇನ್ ಪೆನ್ನುಗಳ ಸಂಗ್ರಹ