ಹುಬ್ಬಳ್ಳಿ: ನಮಗೆ ಯಾವುದೇ ಕಾರಣಕ್ಕೂ, ಯಾರ ಬಗ್ಗೆ ಕೂಡ ಸಾಫ್ಟ್ ಕಾರ್ನರ್ (ಮೃದು ಧೋರಣೆ) ಇಲ್ಲ. ನಮಗೆ ಬಿಜೆಪಿ ಮೇಲೆ ಸಾಫ್ಟ್ ಕಾರ್ನರ್ ಇದ್ದಿದ್ದರೆ, ಕಾಂಗ್ರೆಸ್ ಜತೆ ಸರ್ಕಾರ ಯಾಕೆ? ಮಾಡುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಅವರಿಗೆ ಅದನ್ನ ಬಿಟ್ಟು ಬೇರೆ ಏನು ಹೇಳಲಿಕ್ಕೆ ಸಾಧ್ಯ?. ಎಂದು ಪ್ರಶ್ನಿಸಿದರು.
ಬಿಜೆಪಿ ಜತೆಗೆ 5 ವರ್ಷ ಸರ್ಕಾರ ಮಾಡುತ್ತಿದ್ದೆ. 2006ರಲ್ಲಿ ಸರ್ಕಾರ ಮಾಡಲು ಕಾರಣ ಇದೇ ಸಿದ್ದರಾಮಯ್ಯ. ಅವರ ನಡವಳಿಕೆಯಿಂದ ಮಾಡಿದ್ದು. ನಮ್ಮ ಪಕ್ಷದ ಬಗ್ಗೆ ಬೇರೆ ವಿಷಯ ಇಲ್ಲದೇ ಮಾತು ಎತ್ತಿದರೆ ಒಳ ಒಪ್ಪಂದ ಎಂದು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ ಎಂದರು.
ಸಿಂದಗಿಯಲ್ಲಿ ಗೆಲುವು ನಮ್ಮದೆ:
ಸಿಂದಗಿಯಲ್ಲಿ ಚುನಾವಣೆ ಗೆಲ್ಲುತ್ತೇವೆ. ಕಳೆದ 5 ದಿನಗಳಿಂದ ಪ್ರಚಾರದಲ್ಲಿ ಭಾಗವಹಿಸಿದ್ದೇೆನೆ. ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ದೇವೇೆಗೌಡರ ಕಾಲದ ಹಾಗು ನನ್ನ ಕಾಲದ ನೀರಾವರಿ ಯೋಜನೆಗಳು, ರೈತರ ಸಾಲ ಮನ್ನಾ ಬಗ್ಗೆ ಹಳ್ಳಿಗಳಲ್ಲಿ ಜನ ಸ್ಪಂದಿಸಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಜನತಾ ಪರಿವಾರದ ಸಿಎಂ ಉದಾಸಿ ಬಿಜೆಪಿಗೆ ಹೋದ ನಂತರ ನಮಗೆ ಹಾನಗಲ್ನಲ್ಲಿ ನಾಯಕತ್ವದ ಕೊರತೆ ಇತ್ತು. ಈ ಬಾರಿ ನಾವು ಹಾನಗಲ್ ನಲ್ಲಿ ಮೊದಲೇ ಅಭ್ಯರ್ಥಿ ಘೋಷಣೆ ಮಾಡಿದ್ದೇೆವೆ. ಅಲ್ಲಿಯ ಸ್ಥಿತಿ ನೋಡಿ ನಾನು ಮಾತನಾಡುತ್ತೇನೆ ಎಂದು ತಿಳಿಸಿದರು.
ರಾಜಕೀಯ ಶಕ್ತಿ ಕುಂದಿಸಿಕೊಳ್ಳುವ ಕೆಲಸ ಮಾಡಬೇಡಿ:
ಸಿದ್ದರಾಮಯ್ಯ ಅವರಿಗೆ ಜೆಡಿಎಸ್ನಿಂದ ಸಮಸ್ಯೆ ಇಲ್ಲ ಎಂಬ ಭಾವನೆ ಇರಬಹುದು. ನಾನು ಅವರಿಗೆ ಮನವಿ ಮಾಡುತ್ತೇನೆ. ಸಿದ್ಧರಾಮಯ್ಯ ನಿಮ್ಮ ವರ್ಚಸ್ಸು ಹಾಗು ರಾಜಕೀಯ ಶಕ್ತಿ ಕುಂದಿಸಿಕೊಳ್ಳುವ ಕೆಲಸ ಮಾಡಬೇಡಿ. ನಾನು ಯಾರ ಮೇಲಿಯೂ ವೈಯಕ್ತಿಕ ನಿಂದನೆ ಮಾಡಿಲ್ಲ.
ಆದರೆ ನಾನು ಎಲ್ಲ ನಾಯಕರಿಗೂ ಹೇಳುತ್ತೇನೆ. ಸರ್ಕಾರ ನಡೆಸಬೇಕಾದರೆ ಅದರ ಆಧಾರದ ಮೇಲೆ ಚರ್ಚೆ ಮಾಡಿ. ವೈಯಕ್ತಿಕವಾದ ವಿಚಾರದ ಚರ್ಚೆ ಮಾಡಲು ಹೋದರೆ, ಪರಸ್ಪರ ಕೆಸರೆಚಾಟ ಮಾಡಿಕೊಂಡರೆ ಅದಕ್ಕೆ ಅಂತಿಮ ಅನ್ನೋದು ಇರಲ್ಲ ಎಂದರು.
ಮುಖಾಮುಖಿಯಾದ ಜೋಶಿ, ಶೆಟ್ಟರ್ ಹಾಗೂ ಕುಮಾರಸ್ವಾಮಿ
ನಗರದ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಬರುವಾಗ ಕುಮಾರಸ್ವಾಮಿ ಮಾಧ್ಯಮದವರ ಜತೆ ಮಾತನಾಡುತ್ತಿರುವಾಗ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಅವರು ಕುಮಾರಸ್ವಾಮಿ ಅವರಿಗೆ ಆರೋಗ್ಯ ವಿಚಾರಿಸಿದರು. ಆಗ ಕುಮಾರಸ್ವಾಮಿ ನಿಮ್ಮ ಆಶೀರ್ವಾದ ಸರ್. ಆರಾಮಾಗಿದ್ದೇನೆ ಎಂದು ಹೇಳಿ, ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ಮುಂದುವರೆಸಿದರು.
ಇದನ್ನೂ ಓದಿ: ಜೆಡಿಎಸ್ ನವರು ಏನೇ ಮಾಡಲಿ, ಅವರು ಬಿಜೆಪಿ ಜೊತೆಗೇ ಸೇರಿಕೊಂಡಿದ್ದಾರೆ: ಸಿದ್ದರಾಮಯ್ಯ