ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ಗೌಡ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಯೋಗೇಶ್ಗೌಡರ ಸಹೋದರ ಗುರುನಾಥಗೌಡ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.
ನಮ್ಮ ನಿರಂತರ ಹೋರಾಟದಿಂದ ನ್ಯಾಯ ಸಿಗುವ ಭರವಸೆ ಇದೆ. ಬಿಜೆಪಿ ಸರ್ಕಾರ ಬಂದ ತಿಂಗಳೊಳಗೆ ಸಿಬಿಐಗೆ ವಹಿಸುವಂತೆ ತಿಳಿಸಿದ್ದರು. ಅದರಂತೆ ಸಹೋದರನ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿದ ಬಿಜೆಪಿ ನಾಯಕರಿಗೆ ದೂರವಾಣಿ ಮೂಲಕ ಗರುನಾಥಗೌಡ ಧನ್ಯವಾದ ತಿಳಿಸಿದ್ದಾರೆ.
ಶುಕ್ರವಾರ ನಡೆದ ಸರ್ಕಾರದ ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನಿಸಿರುವುದನ್ನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ಮೂರು ವರ್ಷಗಳ ಹಿಂದೆ ಧಾರವಾಡದ ಸಪ್ತಾಪುರ ಜಿಮ್ನಲ್ಲಿ ಯೋಗೀಶಗೌಡ ಕೊಲೆ ನಡೆದಿತ್ತು. ಕೊಲೆಯ ಹಿಂದೆ ಮಾಜಿ ಸಚಿವ ವಿನಯ್ ಕುಲಕರ್ಣಿ ಕೈವಾಡದ ಆರೋಪ ಕೇಳಿ ಬಂದಿತ್ತು. ವಿನಯ ಕುಲಕರ್ಣಿ ವಿರುದ್ಧ ಆರೋಪ ಮಾಡಿ ಗುರುನಾಥ ಗೌಡ ಹಾಗೂ ತಾಯಿ ತುಂಗಮ್ಮ ಗೌಡರ ಕೋರ್ಟ್ ಮೆಟ್ಟಿಲೇರಿದ್ದರು.
ಯೊಗೇಶಗೌಡನ ಸಹೋದರ ಮತ್ತು ತಾಯಿ ತುಂಗಮ್ಮ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಸದ್ಯ ತನಿಖೆ ನಡೆಸುವಂತೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಿಬಿಐಗೆ ವಹಿಸಿದೆ. ವಿಧಾನಸಭಾ ಚುನಾವಣೆಯ ವೇಳೆ ಯೊಗೇಶ ಗೌಡ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಧಾರವಾಡಕ್ಕೆ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಬಂದಾಗ ಬಹಿರಂಗ ಭರವಸೆ ನೀಡಿದ್ದರು.