ಹುಬ್ಬಳ್ಳಿ (ಧಾರವಾಡ): ನಾವೆಲ್ಲರೂ ಒಂದೇ ತಾಯಿಯ ಮಕ್ಕಳು. ಶಾಂತಿ ಸೌಹಾರ್ದತೆಯಿಂದ ಸಹಬಾಳ್ವೆ ಮಾಡೋಣ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು. ಏ. 16ರಂದು ನಡೆದ ಗಲಭೆ ಹಿನ್ನೆಲೆಯಲ್ಲಿ ಇಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಇತ್ತೀಚೆಗೆ ನಡೆದ ಗಲಭೆ ಕುರಿತು ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್ ಹಾಗೂ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಶಿಕ್ಷೆ ಆಗಲೇಬೇಕು. ಘಟನೆ ಬಳಿಕ ಸದ್ಯ ಹುಬ್ಬಳ್ಳಿಯಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದರು.
ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂದು ಭಾವಿಸಿದ್ದೇವೆ. ಕೆಲವರಿಗೆ ಶಾಂತಿ ಸೌಹಾರ್ದತೆ ಇರಬಾರದು ಎಂಬ ಭಾವನೆಯಿದ್ದು, ಅಲ್ಲಿಯವರೆಗೆ ದೇಶ, ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು ಎಂದು ಮನವಿ ಮಾಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ಆರ್ಭಟ..!
ಗಲಭೆ ವೇಳೆ ಕಲ್ಲು ಎಸೆದ ದಿಡ್ಡಿ ಹನುಮಂತ ದೇವಸ್ಥಾನ, ಆಸ್ಪತ್ರೆ ಹಾಗೂ ಗಲಭೆ ನಡೆದ ಸುತ್ತ ಮುತ್ತಲಿನ ಸ್ಥಳಗಳಿಗೆ ಅಜೀಮ್ ಅವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ, ಡಿಸಿಪಿ ಸಾಹಿಲ್ ಬಾಗ್ಲಾ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಹಾಗೂ ಪ್ರಭಾರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಡಾ.ಎನ್.ಆರ್. ಪುರುಷೋತ್ತಮ್ ಇದ್ದರು.