ಧಾರವಾಡ: ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಕಚೇರಿ ಮೇಲೆ 2014ರಲ್ಲಿ ಸುಮಾರು 1 ಕೋಟಿ ರೂಪಾಯಿ ಖರ್ಚು ಮಾಡಿ ಸೋಲಾರ್ ಸಿಸ್ಟಂ ಹಾಕಲಾಗಿತ್ತು. ಇದರಲ್ಲಿ ಒಂದೇ ಒಂದು ಯೂನಿಟ್ ವಿದ್ಯುತ್ ಉತ್ಪಾದನೆಯಾಗಿಲ್ಲ, ಇದರಲ್ಲಿ ಅಕ್ರಮ ನಡೆದಿರಬಹುದು ಎಂದು ಅನೇಕರು ಆರೋಪಿಸಿ ವಿವಿಧ ಕಡೆಗಳಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಣಕಾಸಿನ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಮೂವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆಗೆ ರಾಜ್ಯಪಾಲರು ಹಸಿರು ನಿಶಾನೆ ತೋರಿದ್ದಾರೆ.
ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸದಸ್ಯರಾದ ಈರೇಶ ಅಂಚಟಗೇರಿ ಹಾಗೂ ಕೆ.ಎಸ್. ಜಯಂತ್ ಅವರು 2020ರ ಡಿ. 30ರಂದು ಸೋಲಾರ್ ಹಗರಣ ಕುರಿತು ಎಸಿಬಿಗೆ ದೂರು ನೀಡಿದ್ದರು. ಅಂದಿನ ಕುಲಪತಿ ಪ್ರೊ. ಹೆಚ್.ಬಿ. ವಾಲೀಕಾರ, ನಿವೃತ್ತ ಕುಲಸಚಿವೆ ಡಾ. ಸಿ.ಎಸ್. ಕಣಗಲಿ ಹಾಗೂ ನಿವೃತ್ತ ರೆಸಿಡೆಂಟ್ ಇಂಜಿನಿಯರ್ ಬಗಲಿ ವಿರುದ್ಧ ತನಿಖೆಗೆ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಎಸಿಬಿ ತನಿಖೆ ನಡೆಸಲು ಅನುಮತಿ ನೀಡಿ ಆದೇಶಿಸಿದ್ದಾರೆ.