ಹುಬ್ಬಳ್ಳಿ: ಕೇಂದ್ರದ ಅಗ್ನಿಪಥ ಯೋಜನೆಗೆ ನಮ್ಮ ವಿರೋಧವಿದೆ. ನಾಲ್ಕು ವರ್ಷದ ಬಳಿಕ ಆಯ್ಕೆಯಾದ ಅಭ್ಯರ್ಥಿಗಳ ಪರಿಸ್ಥಿತಿ ಏನು?, ಕೂಡಲೇ ಅಗ್ನಿಪಥ ಯೋಜನೆ ಸ್ಥಗಿತಗೊಳಿಸಿ ಪ್ರತಿಭಟನಾಕಾರರೊಂದಿಗೆ ಕೇಂದ್ರ ಸರ್ಕಾರ ಮಾತನಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಬಾರದು. ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಜೊತೆಗೆ ಕೂಡಲೇ ಸರ್ಕಾರ ಅಗ್ನಿಪಥ ಯೋಜನೆಯ ನೇಮಕಾತಿ ಸ್ಥಗಿತಗೊಳಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು.
ತಮ್ಮ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಜಾತಿ ನಿಂದನೆ ಪ್ರಕರಣ ದಾಖಲು ವಿಚಾರವಾಗಿ ಮಾತನಾಡಿದ ಅವರು, ಇದು ಬಿಜೆಪಿಯ ಹುನ್ನಾರ, ಛಲವಾದಿ ನಾರಾಯಣಸ್ವಾಮಿ ಮಾಡಿಲ್ಲ. ಬಿಜೆಪಿಯವರು ಅವರ ಕೈಯಿಂದ ಮಾಡಿಸಿದ್ದಾರೆ. ಜಾತಿ ನಿಂದನೆ ಮಾಡಿಯೇ ಇಲ್ಲ. ನಾನು ವಕೀಲ, ನನಗೆ ಎಲ್ಲ ಗೊತ್ತು. ಇದು ಆರ್ಎಸ್ಎಸ್ ಹಾಗೂ ಬಿಜೆಪಿಯವರ ಹುನ್ನಾರ ಎಂದು ಹೇಳಿದರು.
ಯುಪಿಯಲ್ಲಿ ಬುಲ್ಡೋಜರ್ ಕಾರ್ಯಾಚರಣೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಇದು ಕಣ್ಣೊರೆಸುವ ತಂತ್ರ ಅಷ್ಟೇ ಎಂದು ಕೇಂದ್ರದ ವಿರುದ್ಧ ವ್ಯಂಗ್ಯವಾಡಿದರು.
ಇದನ್ನೂ ಓದಿ: ಅಗ್ನಿಪಥ ಯೋಜನೆ ವಿರೋಧಿಸಿ ಧಾರವಾಡದಲ್ಲಿ ಪ್ರತಿಭಟನೆ: ಪೊಲೀಸರಿಂದ ಲಘು ಲಾಠಿ ಪ್ರಹಾರ