ಹುಬ್ಬಳ್ಳಿ : ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲಕ್ಕೆ ಹಾಗೂ ಚರ್ಚೆಗೆ ಎಡೆಮಾಡಿಕೊಟ್ಟಿರುವ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಪಿಎಸ್‌ಐ ನೇಮಕಾತಿಯಲ್ಲಿ ಮತ್ತೊಂದು ಅಕ್ರಮ ಬಯಲಿಗೆ ಬಂದಿದೆ. ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
ಪಿಎಸ್‌ಐ ಲಿಖಿತ ಪರೀಕ್ಷೆಯಲ್ಲಿ ಮಾತ್ರ ಅಕ್ರಮ ನಡೆದಿಲ್ಲ. ಪಿಎಸ್‌ಐ ದೈಹಿಕ ಪರೀಕ್ಷೆಯಲ್ಲಿಯೂ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬುದು ಈಗ ಬಯಲಾಗಿದೆ. ಫಿಜಿಕಲ್ ಟೆಸ್ಟ್‌ನಲ್ಲಿ ಪಾಸ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿರುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಅಭ್ಯರ್ಥಿಗಳು ಹಣ ಸಹ ನೀಡಿದ್ದಾರೆ ಎನ್ನಲಾಗುತ್ತಿದೆ.
ಈ ಹಿನ್ನೆಲೆ ಕಳೆದ ಎರಡು ದಿನಗಳಿಂದ ಹುಬ್ಬಳ್ಳಿಯಲ್ಲಿ ಸಿಐಡಿ ಪೊಲೀಸರು ಬೀಡು ಬಿಟ್ಟಿದ್ದು, ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಲು ಹುಬ್ಬಳ್ಳಿಯ ಯುವಕನೊಬ್ಬ ಹಣ ಪಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಯುವಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು, ಎಳೆ ಎಳೆಯಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಹಣ ನೀಡಿ ಮೋಸ ಹೋದ ವ್ಯಕ್ತಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯವರಾಗಿದ್ದರಿಂದ, ಅಲ್ಲಿಯ ಪೊಲೀಸರೇ ಇದೀಗ ಈ ಯುವಕನನ್ನ ವಿಚಾರಣೆ ನಡೆಸಿದ್ದಾರೆ.
ಜಿ.ಎಸ್.ಸತ್ಯನಾರಾಯಣ ಅವರ ಪುತ್ರ ಕಿರಣ್ ಎಂಬಾತ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಆದರೆ, ಈ ಪರೀಕ್ಷೆಯಲ್ಲಿ ನಮ್ಮ ಹುಡುಗನನ್ನು ಹೇಗಾದರೂ ಪಾಸ್ ಮಾಡಿಸುವಂತೆ ಹುಬ್ಬಳ್ಳಿ ಮೂಲದ ನವೀನ್ ಧಲಬಂಜನ‌್ ಎಂಬಾತನ ಸಂಪರ್ಕ ಮಾಡಿದ್ದರು ಈ ಸತ್ಯನಾರಾಯಣ.
ಆಗ ಕೆಲಸ ಕೊಡಿಸಲು 30,00,000 ರೂಪಾಯಿಗೆ ಬೇಡಿಕೆ ಇಟ್ಟಿದ್ದ ನವೀನ್ ಧಲಬಂಜನ್. ಸತ್ಯನಾರಾಯಣ ಅವರು 7,70,000 ರೂಪಾಯಿಗಳನ್ನು ನೇರವಾಗಿ ಆರೋಪಿ ನವೀನ್‌ನ ಬ್ಯಾಂಕ್ ಖಾತೆಗೆ ಹಾಕಿದ್ದಾರಂತೆ. ಅಲ್ಲದೇ ₹13,50,000 ಹಣವನ್ನು ನಗದು ರೂಪದಲ್ಲಿಯೂ ಕೊಟ್ಟಿದ್ದಾರಂತೆ.
ಫಿಜಿಕಲ್ ಪಾಸ್ ಮಾಡಿಸಿ ಎಂದು ಹಣ ನೀಡಿದ್ದೆವು. ಆದರೆ, ಈಗ ಕೆಲಸ ಕೊಡಿಸದೇ ಹಣವನ್ನೂ ನೀಡದೇ ನವೀನ್ ಮೋಸ ಮಾಡಿದ್ದಾನೆ ಎಂದು ಸತ್ಯನಾರಾಯಣ ಅವರು ದೂರು ನೀಡಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬಾಗೇಪಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ : ಎಲ್ಲಾ ಅಭ್ಯರ್ಥಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್