ಹುಬ್ಬಳ್ಳಿ: ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣದ ಆರೋಪಿಗಳನ್ನು ಮತ್ತೆ ಆರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಇಂದು ನ್ಯಾಯಾಲಯ ಆದೇಶಿಸಿದೆ. ಆರೋಪಿಗಳಾದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಅವರನ್ನು ಈ ಹಿಂದೆ ಆರು ದಿನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ ಇಂದು ಅವಧಿ ಮುಕ್ತಾಯವಾದ್ದರಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಇಂದು ವಿಚಾರಣೆ ನಡೆಸಿದ ನ್ಯಾಯಾಲಯ, ಗುರೂಜಿ ಹತ್ಯೆಯ ಆರೋಪಿಗಳನ್ನು ಜುಲೈ 18 ರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿದೆ. ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ದರು. ಆದರೆ, ಕೇವಲ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನಾಯಾಧೀಶ ನಾಗೇಶ ನಾಯ್ಕ್ ಅವರು ಆದೇಶ ನೀಡಿದ್ದಾರೆ.
ಸರಳವಾಸ್ತು ಸಂಸ್ಥಾಪಕ ಹಾಗೂ ರಾಜ್ಯದ ಪ್ರಸಿದ್ಧ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ನಗರದ ಉಣಕಲ್ ಬಳಿಯ ಖಾಸಗಿ ಹೋಟೆಲ್ನಲ್ಲಿ ಜುಲೈ 5 ರಂದು ಹತ್ಯೆ ಮಾಡಿದ್ದರು. ಹತ್ಯೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಪ್ರಕರಣ ನಡೆದ ನಾಲ್ಕು ಗಂಟೆಗಳಲ್ಲಿ ಆರೋಪಿಗಳು ರಾಮದುರ್ಗದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.
(ಇದನ್ನೂ ಓದಿ: ಭಕ್ತರ ಸೋಗಿನಲ್ಲಿ ಬಂದ್ರು, ಚಾಕುವಿನಿಂದ 40ಕ್ಕೂ ಹೆಚ್ಚು ಬಾರಿ ಇರಿದ್ರು.. ಚಂದ್ರಶೇಖರ್ ಗುರೂಜಿ ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ)